ರಾಷ್ಟ್ರೀಯ

ಲೋಕಸಭೆ ಫಲಿತಾಂಶಕ್ಕೆ 2 ರಿಂದ 3 ದಿನ ತಡ; ಸ್ಪಷ್ಟನೆ ನೀಡಿದ ಆಯೋಗ

Pinterest LinkedIn Tumblr


ನವದೆಹಲಿ; ವಿವಿಪ್ಯಾಟ್ ಪರಿಶೀಲನೆ ಕುರಿತ ವಿರೋಧ ಪಕ್ಷಗಳ ಬೇಡಿಕೆಗೆ ಸಮ್ಮತಿಸಿ ಸೂಚಿಸಿದರೆ ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫಲಿತಾಂಶವನ್ನು ನಿಖರವಾಗಿ ನೀಡಲು 2 ರಿಂದ 3 ದಿನ ತಡವಾಗಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ಮತಗಟ್ಟೆಯಲ್ಲೂ ಯಾದೃಚ್ಚಿಕವಾಗಿ ಮೊದಲು 5 ವಿವಿಪ್ಯಾಟ್​ಗಳ ಜೊತೆ ಮತಗಳನ್ನು ತಾಳೆ ಹಾಕಿ, ತದನಂತರ ಉಳಿದೆಲ್ಲಾ ಯಂತ್ರಗಳ ಮತಗಳನ್ನು ಎಣಿಸಬೇಕು. ಅಕಸ್ಮಾತ್ ಯಾವುದೇ ವಿವಿಪ್ಯಾಟ್​ ಮತಕ್ಕೂ ಇವಿಎಂ ಯಂತ್ರದಲ್ಲಿ ದಾಖಲಾಗಿರುವ ಮತಕ್ಕೂ ವ್ಯತ್ಯಾಸ ಕಂಡುಬಂದರೆ ಆ ಮತಗಟ್ಟೆಯ ಎಲ್ಲಾ ಯಂತ್ರಗಳನ್ನು ವಿವಿಪ್ಯಾಟ್​ ಜೊತೆ ತಾಳೆ ಹಾಕಿಯೇ ಫಲಿತಾಂಶ ನೀಡಬೇಕು ಎಂದು ಒತ್ತಾಯಿಸಿ 22 ವಿರೋಧ ಪಕ್ಷಗಳ ನೇತೃತ್ವದ ಆಯೋಗ ಮಂಗಳವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

ವಿರೋಧ ಪಕ್ಷಗಳ ಮನವಿಯನ್ನು ಸ್ವೀಕರಿಸಿದ್ದ ಆಯೋಗ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆಯನ್ನೂ ನೀಡಿತ್ತು. ಕೊನೆಗೂ ಬುಧವಾರ ತನ್ನ ತೀರ್ಮಾನವನ್ನು ಸ್ಪಷ್ಟಪಡಿಸಿರುವ ಆಯೋಗ, “ಎಲ್ಲಾ ಮತಗಟ್ಟೆಗಳಲ್ಲೂ 5 ವಿವಿಪ್ಯಾಟ್ ತಾಳೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಆಯೋಗ ಸಮ್ಮತಿ ಸೂಚಿಸಿದೆ. ಆದರೆ ಈ ಪ್ರಕ್ರಿಯೆಯಿಂದಾಗಿ ನಿಖರವಾದ ಫಲಿತಾಂಶ ನೀಡಲು ಎರಡರಿಂದ ಮೂರು ದಿನ ವಿಳಂಬವಾಗುವ ಸಾಧ್ಯತೆ ಇದೆ” ಎಂದು ತಿಳಿಸಿದೆ.

ಪಲಿತಾಂಶ ವಿಳಂಭಕ್ಕೆ ನಿಖರ ಕಾರಣವೇನು?; ಭಾರತೀಯ ಚುನಾವಣಾ ಆಯೋಗದ ನೀತಿಯಂತೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಂದು ಹಂತದ ಮತ ಎಣಿಕೆ ಮುಗಿದ ನಂತರವೇ ಮತ್ತೊಂದು ಹಂತದ ಮತ ಎಣಿಕೆ ಸಾಧ್ಯ. ಇದೀಗ ವಿವಿಪ್ಯಾಟ್​ಗಳನ್ನು ತಾಳೆ ಹಾಕುವ ಕುರಿತ ಚುನಾವಣಾ ಆಯೋಗದ ಕಠಿಣ ನಿರ್ದೇಶನಗಳನ್ನು ಅನುಷ್ಠಾನಗೊಳಿಸಿದರೆ ಫಲಿತಾಂಶ ವಿಳಂಬವಾಗುತ್ತದೆ ಎನ್ನಲಾಗುತ್ತಿದೆ.

ಲೋಕಸಭಾ ಕ್ಷೇತ್ರದಲ್ಲಿ ಹಲವು ಶಾಸಕಾಂಗ ಕ್ಷೇತ್ರಗಳೂ ಇರುತ್ತವೆ ಮತ್ತು ಅನೇಕ ಕಡೆಗಳಲ್ಲಿ ನಿರಂತರವಾಗಿ ಮತ ಎಣಿಕೆ ನಡೆಯುತ್ತಿರುತ್ತದೆ. ಒಂದು ಹಂತದ ಮತ ಎಣಿಕೆ ಮುಗಿದ ನಂತರ ಎಲ್ಲಾ ಶಾಸಕಾಂಗ ಕ್ಷೇತ್ರಗಳ ಫಲಿತಾಂಶವನ್ನು ಕೇಂದ್ರ ಕೋಷ್ಟಕಕ್ಕೆ ಕಳುಹಿಸಲಾಗುತ್ತದೆ, ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಅಭ್ಯರ್ಥಿಯ ಲೀಡ್​ ಪ್ರಮಾಣದಲ್ಲಿ ವ್ಯತ್ಯಾಸವಾದಂತೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಸಹಜ. ಏಕೆಂದರೆ ಶಾಸಕಾಂಗ ಚುನಾವಣೆಗಿಂತಲೂ ಪ್ರತಿ ಹಂತದಲ್ಲೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಮಯ ವ್ಯಯವಾಗುತ್ತದೆ.

ಇದಲ್ಲದೆ ವಿರೋಧ ಪಕ್ಷಗಳ ಬೇಡಿಕೆಯಂತೆ ಎಲ್ಲಾ ಮತಗಟ್ಟೆಗಳಲ್ಲೂ ಮೊದಲ 5 ವಿವಿಪ್ಯಾಟ್​ಗಳನ್ನು ತಾಳೆ ಹಾಕಲು ಚುನಾವಣಾ ಆಯೋಗ ಸಮ್ಮತಿ ಸೂಚಿಸಿದೆ. ಇದರಂತೆ ಎಲ್ಲಾ ಮತಗಟ್ಟೆಗಳಲ್ಲೂ ಇವಿಎಂ ಹಾಗೂ ವಿವಿಪ್ಯಾಟ್​ ನಡುವೆ ತಾಳೆಯಾದರೆ ಯಾವುದೇ ಸಮಸ್ಯೆ ಇಲ್ಲ. ಅಕಸ್ಮಾತ್ ಒಂದು ವಿವಿಪ್ಯಾಟ್​ ತಾಳೆಯಾಗದಿದ್ದರೂ ಮತ್ತೆ ಎಲ್ಲಾ ಯಂತ್ರಗಳ ವಿವಿಪ್ಯಾಟ್ ಬ್ಯಾಲೆಟಿನ್​ಗಳನ್ನು ತಾಳೆ ಹಾಕಬೇಕಾಗುತ್ತದೆ. ಪರಿಣಾಮವಾಗಿ ನಿಖರ ಫಲಿತಾಂಶಕ್ಕೆ 2 ರಿಂದ 3 ದಿನಗಳ ವಿಳಂಬವಾಗಬಹುದು ಎಂದು ಊಹಿಸಲಾಗಿದೆ.

2014ರಲ್ಲಿ ಜನರಿಗೆ ವಿವಿಪ್ಯಾಟ್​ ಕುರಿತು ಜನರಿಗೆ ಅಷ್ಟಾಗಿ ಪರಿಚಯ ಇರಲಿಲ್ಲ. ಅಲ್ಲದೆ ಆಗ ದೇಶದಲ್ಲಿ ಕೇವಲ 8 ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ವಿವಿಪ್ಯಾಟ್​ ಪರಿಚಯಿಸಲಾಗಿತ್ತು. ಹೀಗಾಗಿ ವಿವಿಪ್ಯಾಟ್ ತಾಳೆ ನೋಡುವ ಪ್ರಮೇಯವೇ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ದೇಶದ ಎಲ್ಲಾ ಮತಗಟ್ಟೆಗಳಲ್ಲೂ ವಿವಿಪ್ಯಾಟ್ ಅಳವಡಿಸಲಾಗಿದೆ. ಅಲ್ಲದೆ ಪ್ರತಿ ಮತಗಟ್ಟೆಯಲ್ಲೂ ಕನಿಷ್ಟ 5 ವಿವಿಪ್ಯಾಟ್ ಯಂತ್ರಗಳ ಮತಗಳನ್ನು ತಾಳೆ ಹಾಕಬೇಕು ಎಂದು ಚುನಾವಣಾ ಆಯೋಗವೇ ಕಾನೂನು ರೂಪಿಸಿದ್ದು ಸುಪ್ರೀಂ ಕೋರ್ಟ್ ಸಹ ಈ ಕುರಿತು ಆದೇಶಿಸಿದೆ.

ಅಸಲಿಗೆ ಪ್ರತಿ ಮತಗಟ್ಟೆಯ 5 ವಿವಿಪ್ಯಾಟ್ ಯಂತ್ರಗಳ ಬ್ಯಾಲೆಟಿನ್ ಮತಗಳನ್ನು ತಾಳೆ ಹಾಕಲು ಕನಿಷ್ಟ 5 ರಿಂದ 6 ಗಂಟೆಗಳು ಬೇಕಾಗುತ್ತವೆ ಎನ್ನುತ್ತಾರೆ ಇವಿಎಂ ತಜ್ಞರು. ಆ ನಂತರ ಉಳಿದ ಎಲ್ಲಾ ಯಂತ್ರಗಳ ಮತಗಳನ್ನು ಎಣಿಸಬೇಕಾಗುತ್ತದೆ. ಮತಗಟ್ಟೆ ಲೆಕ್ಕಾಚಾರಗಳ ಪ್ರಕಾರ ದೇಶದಾದ್ಯಂತ ಒಟ್ಟು 2,710 ವಿವಿಪ್ಯಾಟ್ ಯಂತ್ರಗಳನ್ನು ತಾಳೆ ಹಾಕಬೇಕು. ಹೀಗಾಗಿ ಫಲಿತಾಂಶ ತಡವಾದರೆ ಯಾವುದೇ ಅಚ್ಚರಿ ಇಲ್ಲ.

ಇದನ್ನೂ ಓದಿ : ಸಮೀಕ್ಷೆಗಳನ್ನು ನಾವು ನಂಬಲ್ಲ,ಇವಿಎಂ ಮೇಲೂ ವಿಶ್ವಾಸವಿಲ್ಲ ಎಂದ ರಾಹುಲ್ ಗಾಂಧಿ ಮತ್ತು ದೀದಿ

ಶೇ.50 ರಷ್ಟು ತಾಳೆಗೆ ವಿರೋಧ ಪಕ್ಷಗಳ ಒತ್ತಾಯ : ಇವಿಎಂ ಯಂತ್ರಗಳ ತಿರುಚುವಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದ ವಿರೋಧ ಪಕ್ಷಗಳು ಎಲ್ಲಾ ಇವಿಎಂ ಯಂತ್ರಗಳ ಮತಗಳನ್ನೂ ವಿವಿಪ್ಯಾಟ್ ಜೊತೆಗೆ ತಾಳೆ ಹಾಕಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ, ಸುಪ್ರೀಂ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಕೊನೆಗೆ ಶೇ.50 ರಷ್ಟು ವಿವಿಪ್ಯಾಟ್​ಗಳನ್ನಾದರೂ ಪರಿಶೀಲನೆ ನಡೆಸಲೇಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು. ಕೊನೆಗೆ ಪ್ರತಿ ಮತಗಟ್ಟೆಯ 5 ವಿವಿಪ್ಯಾಟ್​ಗಳ ಪರಿಶೀಲನೆಗೆ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ.

Comments are closed.