ಲಕ್ನೋ: ಮದುವೆಯ ಹಿಂದಿನ ರಾತ್ರಿ ಯುವಕನೊಬ್ಬ ವರನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಬಳಿ ನಡೆದಿದೆ.
ಕುಮಾರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ವರನನ್ನು ಸುರೇಂದ್ರ ಕೋರಿ ಎಂದು ಗುರುತಿಸಲಾಗಿದೆ. ಆರೋಪಿ ಕತ್ತರಿಯಿಂದ ಇರಿದು ವರನ್ನು ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?
ಮೃತ ವರ ಇನ್ಯಾತ್‍ನಗರ ನಿವಾಸಿಯಾಗಿದ್ದು, ಸಿಂಗೌಲಿ ಗ್ರಾಮ ನಿವಾಸಿ ಪಿಂಕಿ ಜೊತೆ ಮದುವೆ ನಿಶ್ಚಯವಾಗಿತ್ತು. ಅದರಂತೆಯೇ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯುತಿತ್ತು. ಆದರೆ ಭಾನುವಾರ ರಾತ್ರಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ವರ ಬಾತ್‍ರೂಮಿಗೆ ಹೋಗಿದ್ದಾನೆ. ಈ ವೇಳೆ ಆರೋಪಿ ಯುವಕನೊಬ್ಬ ವರನ ಮೇಲೆ ಹಲ್ಲೆ ಮಾಡಿ ಕತ್ತರಿಯಿಂದ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿದ್ದ ವರನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ವರ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಸಿಂಗ್, ಹಲ್ಲೆ ಮಾಡಿದ ಯುವಕ ವಧುವಿನ ನೆರೆಮನೆಯವನಾಗಿದ್ದು, ಲಡ್ಡು ಎಂದು ಗುರುತಿಸಲಾಗಿದೆ. ಈತನ ಜೊತೆ ಸ್ನೇಹಿತರಾದ ಪಿಂಟು ಮತ್ತು ಬಿಟ್ಟು ಇಬ್ಬರು ಅಪರಾಧದಲ್ಲಿ ಭಾಗಿಯಾಗಿದ್ದರು. ವರನ ಮೇಲೆ ಹಲ್ಲೆ ಮಾಡಿದ್ದನು ಇಬ್ಬರು ವ್ಯಕ್ತಿಗಳು ನೋಡಿದ್ದು, ತಕ್ಷಣ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳಲ್ಲಿ ಲಡ್ಡು ಮತ್ತು ಪಿಂಟು ಇಬ್ಬರನ್ನು ಬಂಧಿಸಲಾಗಿದೆ. ಮೊತ್ತೊಬ್ಬನಿಗಾಗಿ ಶೋಧ ಕಾರ್ಯ ಆರಂಭಗೊಂಡಿದೆ. ಆರೋಪಿ ಲಡ್ಡು ವಧು ಪಿಂಕಿ ಜೊತೆ ಸಂಬಂಧ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.