ರಾಷ್ಟ್ರೀಯ

ಸ್ಯಾಮ್ ಪಿತ್ರೋಡಾ ಹೇಳಿಕೆ ಬೇಜವಾಬ್ದಾರಿಯ, ನಾಚಿಕೆಗೇಡಿನ ಹೇಳಿಕೆ, ದೇಶದ ಎದುರು ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ ತರಾಟೆ

Pinterest LinkedIn Tumblr

ಖನ್ನಾ: 1984ರ ಸಿಖ್ ವಿರೋಧಿ ದಂಗೆ ಕುರಿತು ಲಘುವಾಗಿ ಮಾತನಾಡಿದ್ದ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿರುವ ಬಿನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಪಂಜಾಬ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರ್ ಸಿಂಗ್ ಅವರ ಪರ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 1984ರ ದೆಹಲಿ ಸಿಖ್ ಹತ್ಯಾಕಾಂಡದ ಕುರಿತ ಸ್ಯಾಮ್ ಪಿತ್ರೋಡ ಅವರ ಹೇಳಿಕೆ ಖಂಡನಾರ್ಹವಾಗಿದ್ದು, ಅವರು ದೇಶದ ಎದುರು ಕ್ಷಮೆ ಕೇಳಬೇಕು ಎಂದಿದ್ದಾರೆ.

ಪಿತ್ರೋಡಾ ಅವರ ಹೇಳಿಕೆ ಬೇಜವಾಬ್ದಾರಿಯ ಹಾಗೂ ನಾಚಿಕೆಗೇಡಿನ ಹೇಳಿಕೆ. ಹತ್ಯಾಕಾಂಡಗಳು ಯಾವುದೇ ಕಾಲದಲ್ಲಿ ನಡೆದರೂ ಅದು ಖಂಡನಾರ್ಹ. ಇಂತಹ ಹೇಳಿಕೆ ನೀಡಿದ್ದಕ್ಕೆ ಸ್ಯಾಮ್​ ಪಿತ್ರೋಡ ದೇಶದ ಎದುರು ಕ್ಷಮೆ ಕೇಳಬೇಕು. ನಾನು ಫೋನ್ ಮೂಲಕ ಅವರಿಗೆ ಇದನ್ನೇ ಹೇಳಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಪಿತ್ರೋಡಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೆ ಈ ಹೇಳಿಕೆಗಾಗಿ ಅವರು ದೇಶದ ಎದುರು ಕ್ಷಮೆ ಕೇಳಬೇಕು ಎಂದು ಸೂಚಿಸಲಾಗಿದೆ. ಪಕ್ಷದ ಎಲ್ಲಾ ನಾಯಕರಿಗೂ ಸೂಕ್ಷ್ಮ ವಿಚಾರಗಳ ಕುರಿತು ಮಾತನಾಡುವಾಗ ನಾಲಗೆಯ ಮೇಲೆ ನಿಗಾ ವಹಿಸುವಂತೆಯೂ ಎಚ್ಚರಿಕೆ ನೀಡಲಾಗಿದೆ. ಆಡಳಿತ ಪಕ್ಷ ಬಿಜೆಪಿಯನ್ನು ಟೀಕಿಸಲು ವಿರೋಧಿಸಲು ಸಾಕಷ್ಟು ವಿಷಯಗಳಿವೆ. ಅಂತ ಮುಖ್ಯ ವಿಚಾರಗಳ ಕುರಿತು ಮಾತ್ರ ಮಾತನಾಡುವಂತೆಯೂ ಸೂಚಿಸಲಾಗಿದೆ ಎಂದರು.

ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ಅವರು, ಸಿಖ್ ನರಮೇಧದ ಕುರಿತು ಕೇಳಿದ ಪ್ರಶ್ನೆಗೆ ಆಗಿದ್ದು ಆಗಿ ಹೋಯಿತು ಏನು ಮಾಡಲು ಸಾಧ್ಯ. ಈಗ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿ ಎಂದಿದ್ದರು. ಬಳಿಕ ತಮ್ಮ ಹೇಳಿಕೆಗೆ ಕ್ಷಮೆ ಸಹ ಕೇಳಿದ್ದರು.

ಪಿತ್ರೋಡಾ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರ ಹೇಳಿಕೆ ಅವರ ಸೊಕ್ಕಿನ ಪರಮಾವಧಿಯಾಗಿದ್ದು, ಗಾಂಧಿ ಕುಟುಂಬದ ಆಪ್ತರ ಈ ಹೇಳಿಕೆ ಕಾಂಗ್ರೆಸ್ ಜನ ಸಾಮಾನ್ಯರ ಮೇಲಿರುವ ಕಾಳಜಿಯನ್ನು ಮತ್ತು ಮಾನವೀಯತೆಯನ್ನು ತೋರಿಸುತ್ತದೆ ಎಂದಿದ್ದರು.

Comments are closed.