ಅಹಮದಾಬಾದ್: ದೇಶದಲ್ಲಿ ಜಾತಿ ಪದ್ಧತಿ ನಿರ್ಮೂಲನೆಯಾಗಬೇಕು ಎಂದು ರಾಜಕಾರಣಿಗಳು ಮೈಕ್ ಮುಂದೆ ಭಾಷಣ ಮಾಡುತ್ತಲ್ಲೇ ಇರುತ್ತಾರೆ. ಆದರೆ, ಪ್ರಧಾನಮಂತ್ರಿ ಅವರ ತವರು ರಾಜ್ಯದಲ್ಲೇ ದಲಿತರ ಮೇಲಿನ ದೌರ್ಜನ್ಯ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ವರನೊಬ್ಬ ಕುದುರೆ ಮೇಲೆ ಕುಳಿತು ಮದುವೆ ಮೆರವಣಿಗೆ ಮಾಡಿಕೊಂಡ ಎಂಬ ಕಾರಣಕ್ಕೆ ಆ ಗ್ರಾಮದ ಮೇಲ್ವರ್ಗದ ಜನರು ಹೊಸದಾಗಿ ಮದುವೆಯಾದ ದಲಿತ ಸಮುದಾಯದ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಗುಜರಾತ್ನ ಮೆಹಸಾನ ಜಿಲ್ಲೆ, ಕಡಿ ತಾಲೂಕಿನ ಲೋರ್ ಗ್ರಾಮದಲ್ಲಿ ನಡೆದಿದೆ.
ಮೇಲ್ವರ್ಗದ ಜನರು ದಲಿತರ ಮೇಲೆ ಬಹಿಷ್ಕಾರ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಕಾರ್ಯಕರ್ತರು ಬಹಿಷ್ಕಾರಕ್ಕೆ ಒಳಗಾದ ದಲಿತರಿಗೆ ಸಹಾಯ ಮಾಡಲು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸಮಸ್ಯೆಯ ಸೂಕ್ಷ್ಮತೆ ಅರಿತ ಪೊಲೀಸರು ದಲಿತ ಕಾರ್ಯಕರ್ತರು ಮತ್ತು ಗ್ರಾಮಸ್ಥರ ನಡುವೆ ಯಾವುದೇ ಗಲಾಟೆ ಸಂಭವಿಸದಂತೆ ತಡೆಗಟ್ಟಲು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮೂಲಗಳ ಪ್ರಕಾರ, ದಲಿತ ವರ ಮೆಹುಲ್ ಪಾರ್ಮರ್ ತನ್ನ ಮದುವೆಯ ನಿಮಿತ್ತ ಕುದುರೆ ಮೇಲೆ ಕುಳಿತ ಹಳ್ಳಿಯಲ್ಲಿ ಮೆರವಣಿಗೆ ಮಾಡಿದ್ದರು. ಆದರೆ, ಮೇಲ್ವರ್ಗದ ಜನರಿದ್ದ ಬೀದಿಗೆ ಹೋಗಿರಲಿಲ್ಲ.
“ಮದುವೆ ದಿನ ಕುದುರೆ ಮೇಲೆ ಮೆರವಣಿಗೆ ಮಾಡಿದ ನಂತರ ಗ್ರಾಮದವರೆಲ್ಲ ಸಭೆ ಸೇರಿ ದಲಿತರ ಮೇಲೆ ಬಹಿಷ್ಕಾರ ಘೋಷಿಸಿದ್ದಾರೆ. ಅಂಗಡಿಯವರು ದಿನನಿತ್ಯಕ್ಕೆ ಬೇಕಾದ ಹಾಲು ಸೇರಿದಂತೆ ಇತರೆ ಅಗತ್ಯ ಸಾಮಾನುಗಳನ್ನು ನೀಡುತ್ತಿಲ್ಲ,” ಎಂದು ಮೆಹುಲ್ ಪಾರ್ಮರ್ ಹೇಳಿದ್ದಾರೆ. ಎರಡು ದಿನದ ಹಿಂದೆ ದಲಿತ ವರನ ಮದುವೆ ಮೆರವಣಿಗೆ ನಡೆದಿತ್ತು.
“ಮದುವೆ ವೇಳೆ ಕುದುರೆ ಮೇಲೆ ಕುಳಿತು ಮೆರವಣಿಗೆ ಮಾಡುವ ಹಕ್ಕು ದಲಿತರಿಗೆ ಇಲ್ಲ ಎಂದು ಹಳ್ಳಿಯ ಮೇಲ್ಜಾತಿಯವರು ಹೇಳುತ್ತಾರೆ. ಮತ್ತು ಹಳ್ಳಿಯಲ್ಲಿ ದಲಿತರು ಮೆರವಣಿಗೆ ಮಾಡುವಂತಿಲ್ಲ. ಹೀಗಾಗಿ ಹಳ್ಳಿಯವರು ದಲಿತರ ಮೇಲೆ ಬಹಿಷ್ಕಾರ ಹಾಕಿದ್ದಾರೆ,” ಎಂದು ದಲಿತ ಮಹಿಳೆ ವಂದ್ನಾ ಪಾರ್ಮರ್ ಆರೋಪಿಸಿದ್ದಾರೆ.
“ದಲಿತರ ಮೇಲೆ ಗ್ರಾಮದ ಮೇಲ್ಜಾತಿ ಜನರು ಬಹಿಷ್ಕಾರ ಘೋಷಿಸಿದ ನಂತರ ಇಲ್ಲಿನ ದಲಿತರನ್ನು ಈ ಗ್ರಾಮದಿಂದ ಪಕ್ಕದ ಕಾಡಿ ಪಟ್ಟಣಕ್ಕೆ ಸೇರಿದಂತೆ ಇತರೆ ಸ್ಥಳಗಳಿಗೆ ಸ್ಥಳೀಯ ಆಟೋ ರಿಕ್ಷಾಗಳು ಕರೆದೊಯ್ಯುತ್ತಿಲ್ಲ,” ಎಂದು ಲೋರ್ ಗ್ರಾಮದ ದಲಿತರು ಆರೋಪಿಸುತ್ತಾರೆ.
ದಲಿತ ನಾಯಕ ಮತ್ತು ವಡ್ಗಾಮ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರು, ಘಟನೆ ಸಂಬಂಧ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
“ಇದು ತುಂಬಾ ಗಂಭೀರ ವಿಷಯ ಹಾಗೂ ದಲಿತ ವರ ಮದುವೆ ಮೆರವಣಿಗೆ ಮಾಡಿಕೊಂಡಿದ್ದಕ್ಕೆ ಬಹಿಷ್ಕಾರ ಹಾಕುವ ಮೂಲಕ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದ ಮೇಲ್ವರ್ಗದ ಜನರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು,” ಎಂದು ಮೇವಾನಿ ಹೇಳಿದ್ದಾರೆ.
ನ್ಯೂಸ್ 18 ಜೊತೆಗೆ ಮಾತನಾಡಿರುವ ಡಿಪ್ಯೂಟಿ ಸೂಪರಿಟೆಂಡೆಂಟ್ ಪೊಲೀಸ್ ಮೆಹಸಾನಿ ಮನ್ಜಿತ್ ವನ್ಜಾರಾ, “ಘಟನೆ ಬೆಳಕಿಗೆ ಬಂದ ಬಳಿಕ ನಾವು ಗ್ರಾಮದ ದಲಿತ ಮೊಹಲ್ಲಾಗೆ ಭೇಟಿ ಕೊಟ್ಟಿದ್ದೇವೆ. ದಲಿತರಿಗೆ ಎಲ್ಲ ರೀತಿಯ ಸಹಾಯ ಮಾಡುವ ಭರವಸೆಯನ್ನು ನಾನು ನೀಡುತ್ತೇವೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ,” ಎಂದು ಹೇಳಿದ್ದಾರೆ.
ಗುಜರಾತ್ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಈಶ್ವರ್ ಪಾರ್ಮರ್ ಮಾತನಾಡಿ, ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.