ರಾಷ್ಟ್ರೀಯ

2 ತಿಂಗಳ ನಂತರ ಇಂದು ಸುಪ್ರೀಂ​ನಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ

Pinterest LinkedIn Tumblr


ನವದೆಹಲಿ: ರಾಜಕೀಯ ಸೂಕ್ಷ್ಮ ಪ್ರಕರಣವಾದ ಅಯೋಧ್ಯೆ ಪ್ರಕರಣ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ನಡೆಸಲಿದೆ. ಸಮಸ್ಯೆ ಇತ್ಯರ್ಥಕ್ಕೆ ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ಹೆಸರಿನ ಸಂಧಾನ ಸಮಿತಿ ರಚನೆಯ ಎರಡು ತಿಂಗಳ ನಂತರ ಈ ವಿಚಾರಣೆ ನಡೆಯಲಿದೆ.

ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಸದಸ್ಯ ನ್ಯಾಯಪೀಠ, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಎಫ್​ಎಂಐ ಕಲಿಫುಲ್ಲಾ, ಆಧ್ಯಾತ್ಮ ಗುರು ಶ್ರೀ ರವಿಶಂಕರ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನು ಸದಸ್ಯರನ್ನಾಗಿ ನೇಮಿಸಿ, ಎಂಟು ವಾರಗಳಲ್ಲಿ ಸಂಧಾನದ ಸಂಪೂರ್ಣ ಪ್ರಕ್ರಿಯೆಯ ವರದಿ ನೀಡುವಂತೆ ಹೇಳಿತ್ತು.

ಅಯೋಧ್ಯೆ ಸಮಸ್ಯೆ ಬಗೆಹರಿಯಲು ಸಂಧಾನ ಸಮಿತಿ ಕೆಲಸ ಎಷ್ಟರ ಮಟ್ಟಿಗೆ ಸಹಕಾರಿ ಆಗಲಿದೆ ಎಂಬುದು ನಾಳೆ ಗೊತ್ತಾಗಲಿದೆ. ಸಮಿತಿಯ ಪ್ರಕ್ರಿಯೆಗಳು ಸಂಪೂರ್ಣವಾಗಿ ರಹಸ್ಯವಾಗಿ ನಡೆಯಬೇಕು. ವಿದ್ಯುನ್ಮಾನ ಮಾಧ್ಯಮದಲ್ಲಾಗಲಿ, ಮುದ್ರಣ ಮಾಧ್ಯಮದಲ್ಲಾಗಲಿ ವರದಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿತ್ತು.

ಸುಪ್ರೀಂಕೋರ್ಟ್​ ನೀಡಿದ್ದ ಎಂಟು ವಾರಗಳ ಗಡುವು ಮೇ 3ರ ಸಂಧಾನ ಸಮಿತಿ ಅಂತಿಮ ಮಾತುಕತೆಯೊಂದಿಗೆ ಮುಗಿದಿದೆ. ಕೊನೆಯ ಸಂಧಾನ ಉತ್ತರಪ್ರದೇಶದ ಅಯೋಧ್ಯೆ ಸಮೀಪದ ಫರೀಜಾಬಾದ್​ನಲ್ಲಿ ನಡೆದಿತ್ತು. ​ಪಂಚಸದಸ್ಯ ಪೀಠದ ಇತರ ನ್ಯಾಯಮೂರ್ತಿಗಳಾದ ಎಸ್​.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್​.ಎ. ನವಾಜ್​ ಅವರು ಪ್ರಕ್ರಿಯೆಯ ವರದಿ ತಯಾರಿಸುವಂತೆ ಸಂಧಾನ ಸಮಿತಿಗೆ ನಾಲ್ಕು ವಾರಗಳ ನಂತರ ತಿಳಿಸಿದ್ದರು.

ಅಯೋಧ್ಯೆ ಸಮಸ್ಯೆ ಕೇವಲ 1500 ಚದರ ಅಡಿ ಜಾಗದ ಸಮಸ್ಯೆ ಅಷ್ಟೇ ಅಲ್ಲ. ಇದೊಂದು ಧರ್ಮಗಳ ಭಾವನಾತ್ಮಕ ವಿಷಯ. ಸಮಸ್ಯೆ ಸೂಕ್ಷ್ಮತೆ ಮತ್ತು ಮುಂದೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಸುಪ್ರೀಂಕೋರ್ಟ್​ ಸಂಧಾನ ಸಮಿತಿ ರಚನೆ ವೇಳೆ ಹೇಳಿತ್ತು.

ಸಂಧಾನ ಸಮಿತಿ ರಚಿಸಿ ಸುಪ್ರೀಂಕೋರ್ಟ್​ ನೀಡಿದ ಆದೇಶವನ್ನು ನಿರ್ಮೊಹಿ ಅಖಾರ ಹೊರತುಪಡಿಸಿ, ಹಿಂದೂ ಪರ ಸಂಘಟನೆಗಳು ವಿರೋಧಿಸಿದ್ದವು. ಮುಸ್ಲಿಂ ಸಂಘಟನೆಗಳು ಬೆಂಬಲಿಸಿದ್ದವು.

Comments are closed.