ನವದೆಹಲಿ: ರಫೇಲ್ ಹಗರಣದಲ್ಲಿ ಸರ್ವೋಚ್ಚ ನ್ಯಾಯಾಲಯವೇ ಪ್ರಧಾನಿ ನರೇಂದ್ರ ಮೋದಿಯನ್ನು ಕಳ್ಳ ಎಂದು ಹೇಳಿದೆ ಎಂದು ಹೇಳುವ ಮೂಲಕ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ಅರ್ಥೈಸಿ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮೇ.10 ರಂದು ರಫೇಲ್ ಹಗರಣ ಹಾಗೂ ರಾಹುಲ್ ಗಾಂಧಿ ಪ್ರಕರಣ ಎರಡನ್ನೂ ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರವೆ ತಿಳಿಸಿತ್ತು. ಆದರೆ, ಅದಕ್ಕೂ ಮುನ್ನ ಬುಧವಾರವೇ ಮುಖ್ಯನ್ಯಾಯಮೂರ್ತಿ ರಂಜನ್ ಗೋಗಾಯಿ ಪೀಠಕ್ಕೆ ಮತ್ತೊಮ್ಮೆ ಹೊಸದಾಗಿ ಅಫಿಡೆವಿಟ್ ಸಲ್ಲಿಸಿರುವ ರಾಹುಲ್ ಗಾಂಧಿ, “ತಮ್ಮ ಹೇಳಿಕೆ ಕುರಿತು ಬೇಷರತ್ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ. ಅಲ್ಲದೇ , ತಾವು ನೀಡಿದ ಹೇಳಿಕೆ ಉದ್ದೇಶಪೂರ್ವಕವಲ್ಲದ ಹಾಗೂ ಅಜಾಗರುಕತೆಯ ಹೇಳಿಕೆ” ಎಂದು ಒಪ್ಪಿಕೊಂಡಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಹಗರಣವಾಗಿದೆ. ಈ ಕುರಿತು ಸುಪ್ರೀಂ ವಿಚಾರಣೆ ನಡೆಸಬೇಕು ಎಂದು ಕಳೆದ ವರ್ಷ ಕಾಂಗ್ರೆಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರದ ಒಪ್ಪಂದಗಳಲ್ಲಿ ಸರ್ವೋಚ್ಚ ನ್ಯಾಯಾಲಯ ತಲೆ ಹಾಕುವ ಅಗತ್ಯವಿಲ್ಲ ಎಂದು ಅಭಿಪ್ರಾಯಿಸಿದ್ದ ಸುಪ್ರೀಂ ಕಾಂಗ್ರೆಸ್ ಅರ್ಜಿಯನ್ನು ವಜಾ ಮಾಡಿತ್ತು.
ಆದರೆ, ರಫೇಲ್ ಒಪ್ಪಂದದ ಕೆಲವು ಗೌಪ್ಯ ಕಡಗಳು ಸೋರಿಕೆಯಾಗಿ ರಾಷ್ಟ್ರ ಮಟ್ಟದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾದ ನಂತರ ಅನಿವಾರ್ಯವಾಗಿ ರಫೇಲ್ ಒಪ್ಪಂದದ ಕುರಿತ ವಿಚಾರಣೆಗೆ ಸುಪ್ರೀಂ ಒಪ್ಪಿಗೆ ಸೂಚಿಸಿತ್ತು. ಸುಪ್ರೀಂ ಒಪ್ಪಿಗೆ ಆದೇಶವನ್ನು ತಪ್ಪಾಗಿ ಅರ್ಥೈಸಿದ್ದ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ “ಪ್ರಧಾನಿ ನರೇಂದ್ರ ಮೋದಿ ಕಳ್ಳ ಎಂದು ಸ್ವತಃ ನ್ಯಾಯಾಲಯ ತೀರ್ಪು ನೀಡಿದೆ” ಎಂದು ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿದ್ದರು.
ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ನಾಯಕಿ ಹಾಗೂ ನವ ದೆಹಲಿ ಶಾಸಕಿ ಮೀನಾಕ್ಷಿ ಲೇಖಿ ಈ ಕುರಿತು ಸುಪ್ರೀಂ ಕೋರ್ಟ್ಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಹುಲ್ ಗಾಂಧಿ ಹೇಳಿಕೆಯನ್ನು ಕಟುವಾಗಿ ವಿಮರ್ಶಿಸಿತ್ತು ಅಲ್ಲದೆ ಅವರಿಂದ ಸ್ಪಷ್ಟನೆ ಕೇಳಿತು. ಈ ವೇಳೆ ಸುಪ್ರೀಂ ಕೋರ್ಟನ್ನು ತಪ್ಪಾಗಿ ಅರ್ಥೈಸಿದ್ದಕ್ಕೆ ರಾಹುಲ್ ಕ್ಷಮೆ ಕೋರಲಿದ್ದಾರೆ ಎಂದು ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಮುಂಚೆಯೇ ಹೇಳಿದ್ದರು.
ಇಂದು ನ್ಯಾಯಾಲಯಕ್ಕೆ ಮೂರು ಪುಟಗಳ ಅಫಿಡವಿಟ್ ಸಲ್ಲಿಸಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಆರೋಪ ಮಾಡಿದ್ದಕ್ಕೆ ಬೆಷರತ್ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಇನ್ನು ಈ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದ್ದು, ಮುಂದಿನ ಕ್ರಮದ ಬಗ್ಗೆ ಸ್ಪಷ್ಟಣೆ ನೀಡಲಿದೆ.