ರಾಷ್ಟ್ರೀಯ

ಸಾವು ಖಚಿತ ಎಂದು ಗೊತ್ತಿದ್ದರೂ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆ ಬರೆದು ಸಾಧನೆ ಮಾಡಿದ ! ಈಗ ಅದನ್ನೆಲ್ಲ ನೋಡಲು ಆತನೇ ಇಲ್ಲ !

Pinterest LinkedIn Tumblr

ಹೊಸದಿಲ್ಲಿ: ಮೊನ್ನೆಯಷ್ಟೇ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಭರ್ಜರಿ ಅಂಕಗಳಿಸಿರುವ ಟಾಪರ್‌ಗಳ ಕುಟುಂಬದಲ್ಲಿ ಸಂತಸಕ್ಕೆ ಪಾರವೇ ಇಲ್ಲ. ನೊಯ್ಡಾದ ವಿನಾಯಕ್‌ ಶ್ರೀಧರ್‌ ಸಹ ಬಹುತೇಕ 100ಕ್ಕೆ 100 ಸ್ಕೋರ್‌ ಮಾಡಿದ್ದಾನೆ. ಆದರೆ ಆತನ ಮನೆಯಲ್ಲಿ ಮಾತ್ರ ಗಾಢ ಮೌನ. ಏಕೆಂದರೆ ಫಲಿತಾಂಶ ನೋಡಲು ವಿದ್ಯಾರ್ಥಿಯೇ ಇಲ್ಲ. ಆತ ಎಲ್ಲಾ ಪರೀಕ್ಷೆಗಳನ್ನು ಬರೆದೂ ಇಲ್ಲ. ಪರೀಕ್ಷೆಗಳು ಮುಗಿಯುವ ಮುನ್ನವೇ ಸಾವೆಂಬ ಕಬಂಧ ಬಾಹು ಆತನನ್ನು ಕಬಳಿಸಿಬಿಟ್ಟಿದೆ. ಆದರೆ, ಸಾವು ಬೆನ್ನಟ್ಟಿದ್ದರೂ, ಬರೆದದ್ದು ಮೂರು ಪರೀಕ್ಷೆಯಾದರೂ ಇಂಗ್ಲಿಷನ್‌ನಲ್ಲಿ 100, ವಿಜ್ಞಾನದಲ್ಲಿ 96 ಮತ್ತು ಸಂಸ್ಕೃತದಲ್ಲಿ 97 ಅಂಕ ಗಳಿಸಿದ್ದಾನೆ.

ನೊಯ್ಡಾದ ಅಮಿತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ವಿದ್ಯಾರ್ಥಿಯಾದ ಈತನಿಗೆ ‘ಡ್ಯುಶೆನೆ ಮಸ್ಕುಲರ್‌ ಡೈಸ್ಟ್ರೊಪಿ (ಡಿಎಂಡಿ) ಎಂಬ ವಿಚಿತ್ರ ಸಮಸ್ಯೆಯಿತ್ತು. ಕ್ರಮೇಣ ದೇಹದ ಸ್ನಾಯುಗಳು ಒಂದೊಂದಾಗಿಯೇ ಸತ್ತುಹೋಗುವ ಭಯಾನಕ ಸಮಸ್ಯೆಯಿದು. ಕೊನೆಗೆ ಕೊನೆಗೆ ಚಲನೆಯೇ ಇಲ್ಲದಂತಾಗುತ್ತದೆ. ಇಂತಹ ವಿಚಿತ್ರ ಸಮಸ್ಯೆ ನಡುವೆಯೂ ವಿನಾಯಕ್‌ ವಿಲ್‌ಚೆರ್‌ ಮೇಲೆ ಕುಳಿತೇ ಪರೀಕ್ಷೆ ಬರೆದಿದ್ದ. ಈತನಿಗಾಗಿ ಹೆಚ್ಚುವರಿ ಸಮಯಾವಕಾಶ ನೀಡಲಾಗಿತ್ತು. ಇಂಗ್ಲಿಷ್‌ ಮತ್ತು ವಿಜ್ಞಾನ ಪರೀಕ್ಷೆಗಳನ್ನು ಬರೆಯಲು ಬೇರೆಯವರ ನೆರವು ಪಡೆಯಲಾಗಿತ್ತು. ಆದರೆ ಸಂಸ್ಕೃತ ವಿಷಯವನ್ನು ತಾನೇ ಖುದ್ದಾಗಿ ಬರೆಯಬೇಕೆಂದು ಹಠಕ್ಕೆ ಬಿದ್ದಿದ್ದ.

ಸ್ಟೀಫನ್‌ ಹಾಕಿಂಗ್‌ ರೋಲ್‌ ಮಾಡೆಲ್‌: ಇದೇ ರೀತಿ ನರಮಂಡಲ ಸಮಸ್ಯೆಗೆ ತುತ್ತಾಗಿ, ಅಂಗಾಂಗ ಚಲನೆ ಸಾಧ್ಯವಾಗದೆ ಜೀವನವಿಡಿ ವೀಲ್‌ಚೇರ್‌ ಮೇಲೆ ಕಳೆದಿದ್ದ ಬ್ರಿಟನ್‌ನ ಖ್ಯಾತ ಭೌತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಎಂದರೆ ಶ್ರೀಧರ್‌ಗೆ ಅಚ್ಚುಮೆಚ್ಚು. ಅವರಂತೆಯೇ ಮುಂದೆ ದೊಡ್ಡ ವಿಜ್ಞಾನಿಯಾಗುವ ಕನಸನ್ನು ಶ್ರೀಧರ್‌ ಕಂಡಿದ್ದ.

ರಾಮೇಶ್ವರಂ ಕುಟುಂಬದ ಭೇಟಿ: ಪರೀಕ್ಷೆಗಳು ಮುಗಿದ ಬಳಿಕ ರಜೆ ಕಾಲದಲ್ಲಿ ತಮಿಳುನಾಡಿನ ರಾಮೇಶ್ವರಂಗೆ ಭೇಟಿ ನೀಡಲು ಶ್ರೀಧರ್‌ ಯೋಜಿಸಿದ್ದ. ಆದರೆ ಅದು ಕೈಗೂಡುವ ಮೊದಲೇ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಹೀಗಾಗಿ ಬಾಲಕನ ಆಸೆಯನ್ನು ಪೂರೈಸಲು ಕುಟುಂಬ ಸದಸ್ಯರೇ ಮಂಗಳವಾರ ರಾಮೇಶ್ವರಂಗೆ ಭೇಟಿ ನೀಡಿ, ದೇಗುಲದಲ್ಲಿ ಪೂಜೆ ಮಾಡಿಸಿದ್ದಾರೆ.

”ನಾವು ರಾಮೇಶ್ವರಂಗೆ ಬಂದಿದ್ದೇವೆ. ಶ್ರೀಧರ್‌ ಪಾಲಿಗೆ ಅದು ಈಡೇರದ ಬಯಕೆಯಾಗಿ ಉಳಿದುಹೋಗಿದೆ. ಹೀಗಾಗಿ ಅದನ್ನು ಮುಂದೂಡಲು ನಮಗೆ ಇಷ್ಟವಿಲ್ಲ,” ಎಂದು ಬಾಲಕನ ತಾಯಿ ಹೇಳಿದ್ದಾರೆ.

ಅಕ್ಕನಂತೆಯೇ ತಮ್ಮ: ವಿನಾಯಕ್‌ ಶ್ರೀಧರ್‌ ಮಾತ್ರವಲ್ಲ, ಬಾಲಕನ ಅಕ್ಕನೂ ಸಹ ತಂದೆ-ತಾಯಿಯನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರು. ಬಾಲಕನ ಅಕ್ಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ವಿದ್ಯಾರ್ಥಿನಿಯಾಗಿದ್ದರು. ಪ್ರಸ್ತುತ ಅವರು ಬ್ರಿಟೀಷ್‌ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫೆಲೋಶಿಪ್‌ ಮೇಲೆ ಪಿ.ಎಚ್‌ಡಿ ಮಾಡುತ್ತಿದ್ದಾರೆ.

ತಂದೆ-ತಾಯಿ ಕುರಿತು: ವಿನಾಯಕ್‌ ಶ್ರೀಧರ್‌ ಅವರ ತಂದೆ ‘ಜಿಎಂಆರ್‌’ ಮೂಲಸೌಕರ್ಯ ನಿರ್ಮಾಣ ಸಂಸ್ಥೆಯಲ್ಲಿ ಮ್ಯಾನೇಜರ್‌. ತಾಯಿ ಗೃಹಿಣಿ.

”ನನಗೆ ಉದ್ಯೋಗ ಮಾಡಲು ಅವಕಾಶವಿದ್ದರೂ ವಿನಾಯಕ್‌ಗಾಗಿ ಗೃಹಿಣಿಯಾಗಲು ನಿರ್ಧರಿಸಿದೆ. ನನ್ನ ಇಡೀ ದಿನ ಅವನ ಸುತ್ತಲೇ ಇರುತ್ತಿತ್ತು. ಅವನಿಗೆ ಹಲ್ಲು ಉಜ್ಜುವುದರಿಂದ ತುತ್ತು ತಿನಿಸುವವರೆಗೂ ಎಲ್ಲಾ ಕೆಲಸ ನಾನೆ ಮಾಡುತ್ತಿದ್ದೆ. ಆದರೂ ಅವನ ಅಗಾಧ ಆತ್ಮಸ್ಥೈರ್ಯವೇ ನಮಗೆ ದೊಡ್ಡ ಭರವಸೆಯಾಗಿತ್ತು,” ಎನ್ನುತ್ತಾ ಭಾವುಕರಾಗುತ್ತಾರೆ ಬಾಲಕನ ತಾಯಿ.

Comments are closed.