ನವದೆಹಲಿ: ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ಗೆ ಮತ ಹಾಕುವಂತೆ ಎಂದು ಎಸ್ಪಿ-ಬಿಎಸ್ಪಿ ಕಾರ್ಯಕರ್ತರಿಗೆ ಮಾಜಿ ಸಿಎಂ ಮಾಯಾವತಿ ಕರೆ ನೀಡಿದ್ಧಾರೆ. ಬಿಜೆಪಿ ಸೋಲಿಸಲು ಮತದಾನದ ವೇಳೆ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿಗೆ ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
ಲಕ್ನೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ನಾವು ಕಾಂಗ್ರೆಸ್ ಜತೆಗೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ ಎಂಬುದು ವಾಸ್ತವ. ಆದರೆ, ದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಮುಂದಾಗಬೇಕಿದೆ. ಹಾಗಾಗಿ ನನ್ನ ಬಿಎಸ್ಪಿ ಮತ್ತು ಎಸ್ಪಿ ಕಾರ್ಯಕರ್ತರಿಗೆ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮತ ಚಲಾಯಿಸುವಂತೆ ಕರೆ ನೀಡುತ್ತಿದ್ದೇನೆ ಎಂದಿದ್ದಾರೆ.
ಸೋಮವಾರ(ಮೇ.06) ನಡೆಯಲಿರುವ 5ನೇ ಹಂತದ ಮತದಾನದ ವೇಳೆ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ಗೆ ವೋಟ್ ಮಾಡುತ್ತೀರಿ ಎಂದು ಭಾವಿಸುತ್ತೇನೆ. ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಈ ಎರಡರಲ್ಲಿ ಮಾತ್ರ ಮೈತ್ರಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ. ನಮ್ಮ ಮಹಾಘಟ್ಬಂಧನ್ ಎಲ್ಲಾ ಮತಗಳು ಕಾಂಗ್ರೆಸ್ ಹೋಗಲಿವೆ. ಬಿಜೆಪಿ ಸೋಲಿಸಲು ಈ ನಿರ್ಧಾರ ತಾಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಮೂರು ದಿನಗಳ ಹಿಂದಷ್ಟೇ ಮಾಯಾವತಿ ಅವರು “ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದಿದ್ದರು. ಅಲ್ಲದೇ ಉತ್ತರಪ್ರದೇಶದಲ್ಲಿ ಮಹಘಟಬಂಧನ್ ಸೋಲಿಸಲು ಒಟ್ಟಿಗೆ ಕೆಲಸ ಮಾಡುತ್ತಿವೆ. ಸಂಸತ್ನಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಗೆ ತಬ್ಬಿಕೊಂಡಿದ್ದರು ಎಂಬುದನ್ನು ನೋಡಿದ್ದೇವೆ. ಎರಡು ಪಕ್ಷಗಳು ನಮ್ಮನ್ನು ಸೋಲಿಸಲು ಕೆಲಸ ಮಾಡುತ್ತಿವೆ. ಹೀಗಾಗಿಬಿಜೆಪಿ ಸೇರಿದಂತೆ ಕಾಂಗ್ರೆಸ್ಗೂ ಮತ ಹಾಕಬೇಡಿ” ಎಂದು ಮನವಿ ಮಾಡಿದ್ದರು.
ಈ ಬೆನ್ನಲ್ಲೇ ರಾಹುಲ್ ಮತ್ತು ಸೋನಿಯಾ ಗಾಂಧಿಯವರಿಗೆ ವೋಟ್ ಮಾಡಿ ಬಿಜೆಪಿ ಸೋಲಿಸಿ ಎಂದು ಬಿಎಸ್ಪಿ ನಾಯಕಿ ಕರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿವೆ. ಇಲ್ಲಿನ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಥಿ ಮತ್ತು ಸೋನಿಯಾ ಗಾಂಧಿ ಕಣಕ್ಕಿಳಿದಿರುವ ರಾಯ್ ಬರೇಲಿ ಮೈತ್ರಿ ಅಭ್ಯರ್ಥಿ ಹಾಕದೇ ಕಾಂಗ್ರೆಸ್ಗೆ ಮತ ಹಾಕುವಂತೆ ಕರೆ ನೀಡಿವೆ. ಈ ಎರಡು ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಬಿಎಸ್ಪಿ 37, ಎಸ್ಪಿ 37 ಮತ್ತು ಇತರೆ ಮೂರು ಕ್ಷೇತ್ರಗಳಲ್ಲಿ ಪಕ್ಷೇತರರು ಕಣದಲ್ಲಿದ್ದಾರೆ ಎಂಬುದು ಗಮನಾರ್ಹ.