ರಾಷ್ಟ್ರೀಯ

ಮಗಳ ಜೊತೆ ಕೂತು SSLC ಪರೀಕ್ಷೆ ಬರೆದಿದ್ದ ಅಪ್ಪನೂ ಪಾಸ್​!

Pinterest LinkedIn Tumblr

ಪುದುಚೆರಿ: ನಿನ್ನೆಯಷ್ಟೇ ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ರಾಜ್ಯ ಶೇ. 73.70ರಷ್ಟು ಫಲಿತಾಂಶ ಪಡೆದುಕೊಂಡಿದೆ. ಇದಕ್ಕೂ 1 ದಿನ ಮೊದಲು ತಮಿಳುನಾಡು ಎಸ್​ಎಸ್​ಎಲ್​ಸಿ ಫಲಿತಾಂಶ ಕೂಡ ಪ್ರಕಟವಾಗಿದ್ದು, ಅಲ್ಲಿಯೂ ಉತ್ತಮ ಫಲಿತಾಂಶ ದಾಖಲಾಗಿದೆ. ಅದಕ್ಕೂ ಮುಖ್ಯವಾಗಿ ಪುದುಚೆರಿಯಲ್ಲಿ ಒಂದೇ ಕುಟುಂಬದ ಇಬ್ಬರು ತೇರ್ಗಡೆಯಾಗಿದ್ದು, ಮನೆಯಲ್ಲಿ ಸಂತೋಷ ದುಪ್ಪಟ್ಟಾಗಿದೆ.

ಮಕ್ಕಳು ಪರೀಕ್ಷೆಯಲ್ಲಿ ಪಾಸ್​ ಆದರೆ ಅಪ್ಪ-ಅಮ್ಮನಿಗೆ ಅದಕ್ಕಿಂತ ಖುಷಿ ಕೊಡುವ ಸಂಗತಿ ಮತ್ತೊಂದಿಲ್ಲ. ಆದರೆ, ಆ ಖುಷಿ, ಪರೀಕ್ಷೆಯ ಫಲಿತಾಂಶ ಏನಾಗುವುದೋ ಎಂಬ ಭಯವನ್ನು ತಾವೂ ಅನುಭವಿಸುವಂತಾದರೆ ಹೇಗಿರುತ್ತದೆ? ಮಕ್ಕಳು ಫಲಿತಾಂಶದ ಸಂದರ್ಭದಲ್ಲಿ ಅನುಭವಿಸುವ ಚಡಪಡಿಕೆ ಈ ಬಾರಿ ವಿದ್ಯಾರ್ಥಿನಿಯೊಬ್ಬಳ ಅಪ್ಪನಿಗೂ ಆಗಿತ್ತು.

ಒಂದೇ ಮನೆಯ ಇಬ್ಬರು ತೇರ್ಗಡೆಯಾಗಿದ್ದಾರೆ ಎಂದಮಾತ್ರಕ್ಕೆ ಅವರು ಅಕ್ಕ-ತಮ್ಮಂದಿರೋ, ಅಣ್ಣ- ತಂಗಿಯರೋ ಇರಬೇಕೆಂದು ನೀವು ಭಾವಿಸಬಹುದು. ಆದರೆ, ಮಗಳ ಜೊತೆಗೆ ಪರೀಕ್ಷೆ ಬರೆದಿದ್ದ ಅಪ್ಪನೂ ಪಾಸ್​ ಆಗಿರುವುದು ವಿಶೇಷ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 46 ವರ್ಷದ ಸುಬ್ರಹ್ಮಣ್ಯ ಹಾಗೂ ಅವರ ಮಗಳು ತಿರಿಗುಣ ಒಟ್ಟಿಗೇ ಎಸ್​ಎಸ್​ಎಲ್​ಸಿ ಪರೀಕ್ಷೆ ಕಟ್ಟಿದ್ದರು.ಇದೀಗ ಅವರಿಬ್ಬರೂ ಪಾಸಾಗಿದ್ದಾರೆ.

ಇದೇನಪ್ಪ? ಮಗಳು ಪರೀಕ್ಷೆ ಬರೆಯುವ ಸಮಯದಲ್ಲಿ ಅಪ್ಪನಿಗೇಕೆ ಬೇಕಿತ್ತು ಪರೀಕ್ಷೆ ಉಸಾಬರಿ ಅಂತೀರಾ? ಅದಕ್ಕೆ ಕಾರಣವೂ ಇದೆ. ಸುಬ್ರಹ್ಮಣ್ಯ ಅವರು ಕೆಲವು ವರ್ಷಗಳ ಹಿಂದೆ ಸಹಾನುಭೂತಿ ಆಧಾರದ ಮೇಲೆ ಫೀಲ್ಡ್​ ಇನ್​ಸ್ಪೆಕ್ಟರ್​ ಆಗಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆ ಕೆಲಸದಲ್ಲಿ ಪ್ರಮೋಷನ್​ ಬೇಕೆಂದರೆ ಅವರಿಗೆ 10ನೇ ತರಗತಿ ಸರ್ಟಿಫಿಕೆಟ್​ ಬೇಕಾಗಿತ್ತು. ಆದ್ದರಿಂದ 2017ರಲ್ಲೇ ಖಾಸಗಿಯಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಕಟ್ಟಿದ್ದರು. 2018ರಲ್ಲಿ ಮೊದಲ ಬಾರಿಗೆ ಸುಬ್ರಹ್ಮಣ್ಯ ಎಕ್ಸಾಂ ಬರೆದಿದ್ದಾಗ ಗಣಿತ​ ಸೇರಿ 3 ವಿಷಯಗಳಲ್ಲಿ ಫೇಲ್​ ಆಗಿದ್ದರು. ಮತ್ತೆ ಸಪ್ಲಿಮೆಂಟರಿ ಎಕ್ಸಾಂ ಬರೆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ 3ನೇ ಬಾರಿ ಪರೀಕ್ಷೆ ಕಟ್ಟಿದ್ದ ಸುಬ್ರಹ್ಮಣ್ಯ ಎಲ್ಲ ವಿಷಯಗಳಲ್ಲೂ ಪಾಸಾಗಿದ್ದಾರೆ. ಮಗಳು ಒಂದೇ ಬಾರಿಗೆ ಎಲ್ಲ ವಿಷಯಗಳಲ್ಲೂ ತೇರ್ಗಡೆಯಾದರೆ ಅಪ್ಪ 3 ಬಾರಿ ಪ್ರಯತ್ನಿಸಿ ಇದೀಗ ಯಶಸ್ವಿಯಾಗಿದ್ದಾರೆ.

Comments are closed.