ರಾಷ್ಟ್ರೀಯ

ಚುನಾವಣೆಗಾಗಿ 70 ಲಕ್ಷ ದೇಣಿಗೆ ಪಡೆದ ಕನ್ಹಯ್ಯ ಕುಮಾರ್

Pinterest LinkedIn Tumblr


ನವದೆಹಲಿ: ರಾಜಕೀಯ ಪಕ್ಷಗಳಿಗೆ ಜನರು ದೇಣಿಗೆ ನೀಡುವ ಸಂಪ್ರದಾಯಕ್ಕೆ ಭಾರತದಲ್ಲಿ ದಶಕಗಳ ಇತಿಹಾಸವಿದೆ. ಆದರೆ ಹೀಗೆ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗುವ ಹಣಕ್ಕೆ ಯಾವ ಪಕ್ಷಗಳು ಸೂಕ್ತ ಲೆಕ್ಕ ನೀಡುತ್ತಿಲ್ಲ ಎಂಬ ಆರೋಪವೂ ಇದೆ. ಈ ನಡುವೆ ಕ್ರೌಡ್ ಫಂಡಿಂಗ್ ಎಲೆಕ್ಷನ್ ಎಂಬ ಹೊಸ ಸೂತ್ರವೊಂದು ಪರಿಚಯವಾಗಿದ್ದು, ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಕನ್ಹಯ್ಯ ಕುಮಾರ್​ 70 ಲಕ್ಷ ಹಣ ಸಂಗ್ರಹಿಸಿ ದಾಖಲೆ ಬರೆದಿದ್ದಾರೆ.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ವೆಚ್ಚಕ್ಕೆ ಹಣ ಹೊಂದಿಸಲು ಅನೇಕ ಮಾರ್ಗೋಪಾಯಗಳ ಮೊರೆ ಹೋಗಿದ್ದರು. ಈ ಪೈಕಿ ಕ್ರೌಡ್​ ಫಂಡಿಂಗ್​ (ಸಮೂಹ ಹಣ ಕ್ರೋಡೀಕರಣ) ಸಹ ಒಂದು.

ಸುಮಾರು 80 ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಕ್ರೌಡ್​ ಫಂಡಿಂಗ್​ಗೆ ಮುಂದಾಗಿದ್ದರು. ಈ ಪೈಕಿ 78 ಮಂದಿ ಅಭ್ಯರ್ಥಿಗಳು ಏಪ್ರಿಲ್ 23ರ ಅಂತ್ಯದ ವೇಳೆಗೆ ಸುಮಾರು 1.6 ಕೋಟಿ ಹಣ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ ಶೇ.2.84 ರಷ್ಟು ಹಣ ಮಾತ್ರ ಸ್ವತಂತ್ರ್ಯ ಅಭ್ಯರ್ಥಿಗಳ ಪಾಲಾಗಿದ್ದರೆ, ಉಳಿದ 97.1 ರಷ್ಟು ಹಣ 51 ವಿವಿಧ ಪಕ್ಷಗಳ ಪಾಲಾಗಿದೆ.

ಕನ್ಹಯ್ಯ ಕುಮಾರ್​ಗೆ 70 ಲಕ್ಷ : ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪರವಾಗಿ ಬೆಗುಸರಾಯ್​ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕನ್ಹಯ್ಯ ಕುಮಾರ್ ಕ್ರೌಡ್​ ಫಂಡಿಂಗ್ ಮೂಲಕ ವ್ಯಯಕ್ತಿಕವಾಗಿ 70 ಲಕ್ಷ ಗಳಿಸಿ ದಾಖಲೆ ಬರೆದಿದ್ದಾರೆ.

ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಮೂಲಕ ಸಂಗ್ರಹವಾಗಿರುವ ಹಣದ ಪೈಕಿ ಶೇ.42.07 ರಷ್ಟು ಹಣವನ್ನು ಕನ್ಹಯ್ಯ ಕುಮಾರ್​ ಅವರೆ ಪಡೆದಿದ್ದು, ಇದು ಯಾವುದೇ ಪಕ್ಷದ ಅಭ್ಯರ್ಥಿ ವ್ಯಯಕ್ತಿಕ ಅಧಿಕ ಗಳಿಕೆ ಎನ್ನಲಾಗುತ್ತಿದೆ.

ಪೂರ್ವ ದೆಹಲಿಯಿಂದ ಸ್ಪರ್ಧೆ ನಡೆಸುತ್ತಿರುವ ಆಮ್​ ಆದ್ಮಿ ಪಕ್ಷದ ಅತಿಶಿ ಎರಡನೇ ಸ್ಥಾನದಲ್ಲಿದ್ದು ಸುಮಾರು 59.31 ಲಕ್ಷ ಸಂಗ್ರಹಿಸಿದ್ದಾರೆ.

ಕ್ರೌಡ್ ಫಂಡಿಂಗ್​ನಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮಾಕ್ಸಿಸ್ಟ್ ಕಮ್ಯೂನಿಸ್ಟ್ ಪಕ್ಷದ 18 ಅಭ್ಯರ್ಥಿಗಳು ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರೆ, ಆಮ್​ ಆದ್ಮಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ತಲಾ 5 ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ನಾಗ್​ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಸಹ ಇಲ್ಲಿ ಹೆಸರನ್ನು ನೋದಾಯಿಸಿಕೊಂಡಿದ್ದು, ಸುಮಾರು 81,750 ರೂ. ಗಳನ್ನು ಸಂಗ್ರಹಿಸಿದ್ದಾರೆ.

Comments are closed.