ವಾರಣಾಸಿ: ಸಕ್ರಿಯ ರಾಜಕಾರಣಕ್ಕೆ ಇತ್ತೀಚೆಗಷ್ಟೇ ಅಧಿಕೃತ ಹೆಜ್ಜೆಯಿಟ್ಟಿದ್ದ ಪ್ರಿಯಾಂಕ ಗಾಂಧಿ ವಾದ್ರಾ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ಹಿಂದೆ ತಮ್ಮ ಅಮ್ಮ ಸೋನಿಯಾ ಗಾಂಧಿ ಅವರ ರಾಯ್ಬರೇಲಿ ಕ್ಷೇತ್ರದಿಂದ ಪ್ರಿಯಾಂಕ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕಡೆ ಘಳಿಗೆಯಲ್ಲಿ ಪ್ರಿಯಾಂಕ ಬದಲು ಸೋನಿಯಾ ಗಾಂಧಿ ಅವರೇ ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧಿಸುವುದಿಲ್ಲ ಎಂಬ ಮಾತುಗಳೂ ಪಕ್ಷದ ಮೂಲಗಳಿಂದ ಕೇಳಿ ಬಂದಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ದೀಪಕ್ ಸಿಂಗ್ ಈ ಮಾಹಿತಿಯನ್ನು ನ್ಯೂಸ್18 ಉತ್ತರಪ್ರದೇಶಕ್ಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ಇಂಗಿತವನ್ನು ಪ್ರಿಯಾಂಕ ಗಾಂಧಿ ವ್ಯಕ್ತಪಡಿಸಿದ್ದರು. ಅದರಂತೆಯೇ ಮೋದಿಯವರಿಗೆ ಸೆಡ್ಡು ಹೊಡೆಯಲು ಪ್ರಿಯಾಂಕ ಗಾಂಧಿ ಮೊದಲ ಬಾರಿಗೆ ಚುನಾವಣೆಗೆ ಕಾಲಿಡುತ್ತಿದ್ದಾರೆ. ಭೀಮ್ ಸೇನೆಯೆ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೂಡ ವಾರಣಾಸಿಯಿಂದ ಸ್ಪರ್ಧಿಸುತ್ತೇನೆ ಎಂದಿದ್ದರು. ಆದರೆ ಅವರು ಇದುವರೆಗೂ ನಾಮಪತ್ರ ಸಲ್ಲಿಸಿಲ್ಲ. ಅವರೂ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ದೀಪಕ್ ಸಿಂಗ್ ಹೇಳಿಕೆಯಂತೆ ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದರೆ, ಈ ಬಾರಿ ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿಯ ಕ್ಷೇತ್ರ ವಾರಣಾಸಿ ಆಗಲಿದೆ ಎಂಬುದರಲ್ಲಿ ಸಂಶಯವಿಲ್ಲ.
Comments are closed.