ರಾಷ್ಟ್ರೀಯ

ಒಡಿಶಾದಲ್ಲಿ ವಾಹನಕ್ಕೆ ಬೆಂಕಿಯಿಟ್ಟು ಮಹಿಳಾ ಚುನಾವಣಾ ಅಧಿಕಾರಿ ಹತ್ಯೆಗೈದ ನಕ್ಸಲರು

Pinterest LinkedIn Tumblr

ಭುವನೇಶ್ವರ: ಲೋಕಸಭಾ ಚುನಾವಣೆಯ ಭಾಗವಾಗಿ ಇಂದು ದೇಶದ ಹಲವು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಮತದಾನಕ್ಕೆ ಸಜ್ಜಾಗುತ್ತಿದ್ದ ಒಡಿಶಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಮಹಿಳಾ ಚುನಾವಣಾ ಅಧಿಕಾರಿಯನ್ನೇ ಕೊಲೆಗೈದಿದ್ದಾರೆ.

ಒಡಿಶಾ ಕಂದಮಾಲ್ ಜಿಲ್ಲೆಯ ಗೋಚಪಡಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಂಜುಕ್ತಾ ಕಂದಮಾಲ್ ಕೊಲೆಯಾದ ಮಹಿಳಾ ಅಧಿಕಾರಿ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಸರ್ಕಾರಿ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ಉಗ್ರರ ಗುಂಪು ವಾಹನಕ್ಕೆ ಬೆಂಕಿ ಇಟ್ಟು, ಅಧಿಕಾರಿಯನ್ನ ಕೊಲೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ನಕ್ಸಲರು ಚೆಲ್ಲಿದ್ದ ಕರಪತ್ರಗಳು ಪತ್ತೆಯಾಗಿದ್ದು, ಚುನಾವಣೆಯನ್ನು ಬಹಿಷ್ಕಾರ ಮಾಡುವಂತೆ ಪತ್ರಗಳಲ್ಲಿ ಆಗ್ರಹಿಸಲಾಗಿದೆ. ಚುನಾವಣಾ ವಾಹನವನ್ನು ಸ್ಫೋಟಿಸಲು ನಕಲ್ಸರು ಪ್ಲಾನ್ ಮಾಡಿದ್ದರು. ಆದರೆ ವಾಹನ ಆಗಮಿಸುವ ಮುನ್ನವೇ ಸ್ಫೋಟಕಗಳು ಬ್ಲಾಸ್ಟ್ ಆಗಿತ್ತು ಎಂದು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೇ ತಮ್ಮ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ಮಹಿಳಾ ಅಧಿಕಾರಿಯ ತಲೆಗೆ ಬುಲೆಟ್ ತಗುಲಿತ್ತು. ಘಟನೆಯಲ್ಲಿ ನಾವು ನಾಲ್ಕು ಅಧಿಕಾರಿಗಳು ಸ್ಥಳದಿಂದ ಪರಾರಿಯಾಗಲು ಸಾಧ್ಯವಾಯಿತು ಎಂದು ವಿವರಿಸಿದ್ದಾರೆ.

ಇತ್ತ ಒಡಿಸ್ಸಾದ ಮುಂಗುಣಿಪದರ್ ಎಂಬ ಗ್ರಾಮದ ಬಳಿಯೂ ಚುನಾವಣಾ ಅಧಿಕಾರಿಗಳು ತೆರಳುತ್ತಿದ್ದ ವಾಹನಕ್ಕೆ ನಕಲ್ಸರು ಬೆಂಕಿ ಇಟ್ಟಿದ್ದಾರೆ. ಆದರೆ ಘಟನೆಯಲ್ಲಿ ಅಧಿಕಾರಿಗಳಿಗೆ ಯಾವುದೇ ಹಾನಿಯನ್ನು ಮಾಡಿಲ್ಲ ಎಂಬ ಮಾಹಿತಿ ಲಭಿಸಿದೆ.

ನಕಲ್ಸರ ದಾಳಿಯ ಹಿನ್ನೆಲೆಯಲ್ಲಿ ಚುನಾವಣೆಗೆ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದರೂ ಕೂಡ ನಕಲ್ಸರ ದಾಳಿ ನಡೆದಿದ್ದು, 2ನೇ ಹಂತದ ಮತದಾನವಾದ ಇಂದು ಒಡಿಶಾದ 5 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಐದು ಕ್ಷೇತ್ರಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ.

Comments are closed.