ರಾಷ್ಟ್ರೀಯ

ಜೆಟ್​ ಏರ್​ವೇಸ್​ ಸೇವೆ ಸ್ಥಗಿತಕ್ಕೆ ವಿಷಾದ ವ್ಯಕ್ತಪಡಿಸಿದ ವಿಜಯ್ ಮಲ್ಯ; ‘ತಾನು ಸಾಲ ತೀರಿಸಲು ಸಿದ್ಧನಿದ್ದರೂ ಬ್ಯಾಕ್’ಗಳು ಸಿದ್ಧವಿಲ್ಲ’

Pinterest LinkedIn Tumblr

ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದಾಗಿ ಸೇವೆ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನಸಂಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ವಿಷಾಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಲ್ಯ, ‘ಭಾರತ ಸರ್ಕಾರ ಸಾರ್ವಜನಿಕ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಗಳ ನಡುವೆ ತಾರತಮ್ಯ ಮಾಡುತ್ತಿದ್ದು ಇದೇ ಕಾರಣಕ್ಕೆ ಖಾಸಗಿ ಸಂಸ್ಥೆಗಳು ದಿವಾಳಿಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಭಾರತದ ಮತ್ತೊಂದು ಬೃಹತ್ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ ವೇಸ್ 8 ಸಾವಿರ ಕೋಟಿ ಸಾಲದ ಹೊರೆಯಲ್ಲಿದ್ದು, ಮಂಗಳವಾರ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಯ ಸರಣಿ ಟ್ವೀಟ್ ಮಾಡಿದ್ದು, ‘ಒಂದು ಕಾಲದಲ್ಲಿ ಕಿಂಗ್ ಫಿಷರ್ ಗೆ ಜೆಟ್ ಏರ್ ವೇಸ್ ಪ್ರಮುಖ ಪ್ರತಿಸ್ಪರ್ಧಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಉಳಿಸಿಕೊಳ್ಳುವ ಭರದಲ್ಲಿ ಸಾರ್ವಜನಿಕ ನಿಧಿಯಲ್ಲಿ 35 ಸಾವಿರ ಕೋಟಿ ಜಾಮೀನು ಮಾಡಿದ ಕಾರಣ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸಬೇಕಾಯಿತು’ ಎಂದು ಹೇಳಿದ್ದಾರೆ.

ಅಂತೆಯೇ ‘ನರೇಶ್ ಗೋಯಲ್ ಹಾಗೂ ಅವರ ತಂಗಿ ನೀತಾ ಗೋಯಲ್ ಅತ್ಯಂತ ಶ್ರಮವಹಿಸಿ ಜೆಟ್ ಏರ್ ವೇಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ಅವರ ಪರಿಶ್ರಮವನ್ನು ನೆನೆದರೆ ಅತ್ಯಂತ ಹೆಮ್ಮೆ ಎನಿಸುತ್ತದೆ. ಈ ಸಂಸ್ಥೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿತ್ತು. ಆದರೆ ಪ್ರಸ್ತುತ ಈ ಸಂಸ್ಥೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಭಾರತದಲ್ಲಿ ಯಾವ ಕಾರಣಕ್ಕಾಗಿ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ?” ಎಂದು ಗಂಭೀರ ಪ್ರಶ್ನೆ ಮಾಡಿದ್ದಾರೆ.

ಜೈಲಿನಲ್ಲಿದ್ದರೂ ಸರಿ, ಖಂಡಿತಾ ಸಾಲ ತೀರಿಸುತ್ತೇನೆ
ಇದೇ ವೇಳೆ ತಮ್ಮ ಬಹುಕೋಟಿ ಸಾಲದ ಕುರಿತು ಮಾತನಾಡಿರುವ ಮಲ್ಯ, ‘ಸಾಲವಾಗಿ ಪಡೆದಿರುವ ಹಣದ ಶೇ.100 ರಷ್ಟನ್ನು ಹಿಂದಿರುಗಿಸುತ್ತೇನೆ ಎಂದು ನಾನು ಪ್ರತಿಬಾರಿಯು ಹೇಳುತ್ತಿದ್ದೇನೆ. ನಾನು ಲಂಡನ್ ​ನಲ್ಲಿರಲಿ ಅಥವಾ ಭಾರತದ ಜೈಲಿನಲ್ಲಿರಲಿ ಬ್ಯಾಂಕಿಗೆ ಪಾವತಿಸಬೇಕಾದ ಹಣವನ್ನು ಖಂಡಿತಾ ಪಾವತಿಸುತ್ತೇನೆ. ಈಗಾಗಲೇ ಹಣ ಪಾವತಿಸಲು ನಾನು ಸಿದ್ದನಿದ್ದೇನೆ. ಆದರೆ, ಅದನ್ನು ಪಡೆಯಲು ಯಾವ ಬ್ಯಾಂಕ್ ಅಧಿಕಾರಿಯೂ ಮುಂದೆ ಬರುತ್ತಿಲ್ಲ. ಆದರೆ ಇದನ್ನು ಹೇಳದ ಮಾದ್ಯಮಗಳು ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿವೆ. ಅಲ್ಲದೆ ಕೇಂದ್ರ ಸರ್ಕಾರ ಚುನಾವಣೆಯಲ್ಲಿ ಹೆಚ್ಚು ಮತಗಳಿಸಲು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.