ರಾಷ್ಟ್ರೀಯ

ರಫೇಲ್ ಹಗರಣವು ಛತ್ತೀಸ್​ಗಡದ ಪುಟ್ಟ ಹಳ್ಳಿಗೆ ತಂದ ಫಜೀತಿ!

Pinterest LinkedIn Tumblr


ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳು ಪ್ರಯೋಗಿಸುತ್ತಿರುವ ಅಸ್ತ್ರಗಳಲ್ಲಿ ರಫೇಲ್ ವಿಮಾನ ಖರೀದಿ ಹಗರಣವೂ ಒಂದು. ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ವೈಯಕ್ತಿಕವಾಗಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ವಿಪಕ್ಷಗಳು ಗಂಭೀರವಾಗಿ ಆರೋಪಿಸುತ್ತಿವೆ. ಇದರ ಮಧ್ಯೆ ಛತ್ತೀಸ್​ಗಡ ರಾಜ್ಯದಲ್ಲಿ ಮತ್ತೊಂದು ‘ರಫೇಲ್’ ಸಣ್ಣದಾಗಿ ಸದ್ದು ಮಾಡುತ್ತಿದೆ. ಛತ್ತೀಸ್​ಗಡದ ಮಹಾಸಮುಂದ್ ಮತಕ್ಷೇತ್ರದಲ್ಲಿ ಬರುವ ಒಂದು ಪುಟ್ಟ ಗ್ರಾಮ ‘ರಫೇಲ್’. ರಾಜಕೀಯವಾಗಿ ನಡೆಯುತ್ತಿರುವ ರಫೇಲ್ ಯುದ್ಧದಿಂದಾಗಿ ತಮಗೆ ಬಹಳ ಮುಜುಗರವಾಗುತ್ತಿದೆ ಎಂದು ಹೆದರಿರುವ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನೇ ಬದಲಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.

“ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮನ್ನು ತನಿಖೆಗೊಳಪಡಿಸುತ್ತಾರೆ ಎಂದು ಬೇರೆ ಗ್ರಾಮಗಳ ಜನರು ನಮ್ಮ ಮೇಲೆ ತಮಾಷೆ ಮಾಡುತ್ತಿರುತ್ತಾರೆ… ನಮ್ಮ ಊರಿನ ಬಗ್ಗೆ ಯಾರಿಗೂ ಕಾಳಜಿ ಇಲ್ಲವಾದರೂ ರಫೇಲ್ ವಿವಾದದಿಂದಾಗಿ ಜನರು ಕೆಟ್ಟದಾಗಿ ನೋಡುವಂತಾಗಿದೆ,” ಎಂದು ಗ್ರಾಮದ ಹಿರಿಯ ವ್ಯಕ್ತಿ 83 ವರ್ಷದ ಧರಮ್ ಸಿಂಗ್ ಅವರು ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಫೇಲ್ ಗ್ರಾಮಸ್ಥರು ತಮ್ಮ ಊರಿನ ಹೆಸರು ಬದಲಿಸುವಂತೆ ಮನವಿ ಮಾಡಲು ಮುಖ್ಯಮಂತ್ರಿ ಕಚೇರಿಗೂ ಹೋಗಿ ಬಂದಿದ್ದಾರೆ.

ಕೇವಲ 200 ಜನರು ಇರುವ ಈ ಗ್ರಾಮಕ್ಕೆ ರಫೇಲ್ ಹೆಸರು ಹೇಗೆ ಬಂತು? ಅದರ ಅರ್ಥವೇನು? ಎಂಬುದು ಯಾರಿಗೂ ಗೊತ್ತಿಲ್ಲ. ಛತ್ತೀಸ್​ಗಡ ರಾಜ್ಯ ರಚನೆಯಾಗಿದ್ದು 2000ರಲ್ಲಿ. ಅದಕ್ಕಿಂತ ಮುಂಚಿನಿಂದಲೂ ಈ ಗ್ರಾಮ ಅಸ್ತಿತ್ವದಲ್ಲಿದೆಯಾದರೂ ರಫೇಲ್ ಹೆಸರಿನ ಮರ್ಮ ಯಾರಿಗೂ ಗೊತ್ತಿಲ್ಲವಂತೆ. ನೀರಾವರಿ ಇರಲಿ, ಕುಡಿಯಲು ನೀರು, ಶೌಚಾಲಯದ ಮೂಲಭೂತ ವ್ಯವಸ್ಥೆಯೂ ಈ ಗ್ರಾಮದಲ್ಲಿಲ್ಲ. ರೈತರು ಬೆಳೆ ಬೆಳೆಯಲು ಮಳೆಯನ್ನೇ ಅವಲಂಬಿಸಿದ್ದಾರೆ. ಇಂತಿಪ್ಪ ಕುಗ್ರಾಮವು ರಫೇಲ್ ಹೆಸರಿನಿಂದಾಗಿ ಹೆಸರುವಾಸಿಯಾಗುತ್ತಿದೆ. ಇದರಿಂದಲಾದರೂ ಆಡಳಿತಗಾರರ ಚಿತ್ತ ಈ ಕಡೆ ಹರಿದು ಏನಾದರೂ ಮೂಲಸೌಕರ್ಯ ಒದಗಿಸಲಾಗುತ್ತದಾ ಎಂದು ನಿರೀಕ್ಷಿಸಬಹುದು.

Comments are closed.