ರಾಷ್ಟ್ರೀಯ

ಮತ ಹಾಕಿದ ಕೂಡಲೇ ಶಾಯಿಯನ್ನು ಅಳಿಸಬಹುದು!

Pinterest LinkedIn Tumblr


ನವದೆಹಲಿ: ಪ್ರಜಾಪ್ರಭುತ್ವದ ಹಬ್ಬ ಇಂದಿನಿಂದ ಆರಂಭಗೊಂಡಿದೆ. ಆದರೆ ಈ ಹಬ್ಬದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಕೈ ಬೆರಳನ್ನು ಎತ್ತಿ ತೋರಿಸಿ ಹೆಮ್ಮೆಯಿಂದ ಹೇಳಿಕೊಳ್ಳಲು ಕಾರಣವಾಗುವ ಶಾಯಿಯನ್ನು ಅಳಿಸಬಹುದು ಎನ್ನುವ ಸ್ಫೋಟಕ ಸುದ್ದಿ ಈಗ ಪ್ರಕಟವಾಗಿದೆ.

ಹೌದು. ಚುನಾವಣಾ ಶಾಯಿ ಸುಲಭವಾಗಿ ಅಳಿಸಲು ಸಾಧ್ಯವಿಲ್ಲ ಮತ್ತು ಹಲವು ದಿನಗಳವರೆಗೆ ಇರುತ್ತದೆ. ಆದರೆ ಇಂದು ಮತ ಕೇಂದ್ರದಲ್ಲಿ ಹಾಕಿದ ಶಾಯಿಯನ್ನು ಕೆಲವೇ ನಿಮಿಷದಲ್ಲಿ ಅಳಿಸಿ ಹಾಕಬಹುದು ಎಂದು ವರದಿಯಾಗಿದೆ.

ದೇಶದ ಹಲವು ಕಡೆ ಮತದಾರರು ಶಾಯಿಯನ್ನು ಕೂಡಲೇ ಅಳಿಸಿ ಹಾಕಿ ಯಾಕೆ ಇಷ್ಟೊಂದು ಕಳಪೆ ಗುಣಮಟ್ಟದ ಶಾಯಿಯನ್ನು ನೀಡಲಾಗಿದೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

ಶಾಯಿಯನ್ನು ಅಳಿಸಿ ಹಾಕಿದರೆ ನಕಲಿ ಮತದಾನ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಆಯೋಗ ಕೂಡಲೇ ಈ ವಿಚಾರದ ಬಗ್ಗೆ ಗಮನ ಹರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.

ಮೈಸೂರಿನ ಶಾಯಿ:
ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಗೆ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರ್ ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿ. ಕಂಪನಿ ಪೂರೈಸುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಗೆ 26 ಲಕ್ಷ ಬಾಟಲ್ ಅಳಿಸಲಾಗದ ಶಾಯಿಯನ್ನು ಕಂಪನಿ ಚುನಾವಣಾ ಆಯೋಗಕ್ಕೆ ನೀಡಿದೆ.

1962ರಲ್ಲಿ ಕೇಂದ್ರ ಚುನಾವಣಾ ಆಯೋಗವು ಮೈಸೂರ್ ಪೇಂಟ್ಸ್ ಜೊತೆ ಅಳಿಸಲಾಗದ ಶಾಯಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದಲೂ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಈ ಕಂಪನಿಯೇ ಶಾಯಿ ಪೂರೈಸುತ್ತಿದೆ.

Comments are closed.