ರಾಷ್ಟ್ರೀಯ

ಕಾಶ್ಮೀರದಲ್ಲಿ ಕಲಂ 370ನ್ನು ರದ್ದುಗೊಳಿಸಿದರೆ ಪ್ರತ್ಯೇಕ ದೇಶದ ಕೂಗಿಗೆ ಇನ್ನಷ್ಟು ಬಲ? ಯಾಕೆ ಗೊತ್ತೇ?

Pinterest LinkedIn Tumblr


ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹಾಗೂ 35(ಎ) ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರ ಹಾದಿ ಸುಗಮಗೊಳಿಸಿದಂತಾಗುತ್ತದೆ ಎಂದು ಜಮ್ಮು-ಕಾಶ್ಮೀರ್ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ದೆಹಲಿಯಲ್ಲಿ ಬಿಜೆಪಿ ಪಕ್ಷವು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ ಕಣಿವೆ ರಾಜ್ಯದಲ್ಲಿ ಕಲಂ 370ರ ವಿಧಿಯ ಅನ್ವಯ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸುವುದು ಎಂದು ಆಶ್ವಾಸನೆ ನೀಡಲಾಗಿದೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಇದನ್ನು ಪುನರುಚ್ಚರಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಫಾರೂಕ್ ಅಬ್ದುಲ್ಲಾ, ಕಲಂ 370 ನ್ನು ರದ್ದು ಗೊಳಿಸಿದರೆ ನಾವು ಸುಮ್ಮನೆ ಕೂರುತ್ತೇವೆ ಎಂದು ಬಿಜೆಪಿಗರು ಭಾವಿಸಿದ್ದರೆ ಅದು ತಪ್ಪು. ನಾವು ಈ ಕಲಂ ರದ್ದುಪಡಿಸುವವರ ವಿರುದ್ಧ ಹೋರಾಡುತ್ತೇವೆ. ಏಕೆಂದರೆ ಕಣಿವೆ ರಾಜ್ಯಕ್ಕೆ ನೀಡುತ್ತಿರುವ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಿದರೆ ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಆಜಾದಿಗಳ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದಂತಾಗುತ್ತದೆ ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕಲಂ 370 ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರಕಾರ ದಶಕಗಳ ಕಾಲದಿಂದ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ. ಅಲ್ಲದೆ ಕಲಂ 35(ಎ) ಅಡಿಯಲ್ಲಿ ಕಣಿವೆ ರಾಜ್ಯದ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ನೀಡಲಾಗಿದೆ.

ಇದನ್ನು ಪ್ರಶ್ನಿಸಿ ಸಾಮಾನ್ಯ ಜನ ಈವರೆಗೆ ಸುಪ್ರೀಂ ಕೋರ್ಟ್​ನಲ್ಲಿ ಅಸಂಖ್ಯಾತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ಅರ್ಜಿಗಳನ್ನು ವಿಲೇವಾರಿ ಮಾಡುವುದೇ ಸುಪ್ರೀಂ ಕೋರ್ಟ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಏನಿದು ಕಲಂ 370?:

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಭಯಕೆಯನ್ನು ಹೊಂದಿದ್ದರು.

ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.

ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.
ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.
ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು
ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.
ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.
ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.

ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.
ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.
ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.
ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.
ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.
ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.
ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.
ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.

ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.

ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ.

ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ಚುನಾವಣಾ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ.

ಆದರೆ, ಕಲಂ 370ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದಲ್ಲಿ ಗಲಭೆಗಳು ಭುಗಿಲೇಳುವ ಸಾಧ್ಯತೆಗಳೂ ಇದೆ, ಹೀಗಾಗಿ ಇದು ಕೇವಲ ಚುನಾವಣಾ ಆಶ್ವಾಸನೆಯಾಗಿಯಷ್ಟೆ ಉಳಿಯಲಿದೆಯಾ? ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಸೂಕ್ಷ್ಮ ವಿಚಾರವನ್ನು ಸರಿಯಾಗಿ ನಿಭಾಯಿಸಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆಯಾ? ಎಂಬುದನ್ನು ಚುನಾವಣಾ ನಂತರದ ದಿನಗಳು ಸ್ಪಷ್ಟಪಡಿಸಲಿವೆ.

Comments are closed.