
ನವದೆಹಲಿ: ಬಿಜೆಪಿ ಸಭೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ‘ಪಪ್ಪು’ ಎನ್ನುವ ಶಬ್ದ ಬಳಕೆ ಮಾಡಿದರೆ ಸಿಳ್ಳೆ-ಚಪ್ಪಾಳೆಗಳು ಬೀಳುವುದು ಸಾಮಾನ್ಯ. ಆದರೆ, ಇತ್ತೀಚೆಗೆ ನಡೆದ ಬಿಜೆಪಿ ಚುನಾವಣೆ ಸಭೆಯಲ್ಲಿ ಈ ವಿಚಾರ ಸುಳ್ಳಾಗಿದೆ. ರಾಹುಲ್ಗೆ ಪಪ್ಪು ಎಂದ ಬಿಜೆಪಿ ನಾಯಕರಿಗೆ ಮಹಿಳೆಯೊಬ್ಬಳು ತರಾಟೆ ತೆಗೆದುಕೊಂಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಥುರಾದ ಹಳ್ಳಿಯೊಂದರಲ್ಲಿ ಬಿಜೆಪಿ ಚುನಾವಣಾ ಸಭೆ ನಡೆಸುತ್ತಿತ್ತು. ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಪಕ್ಷವನ್ನು ತೆಗಳುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಆ ಮುಖಂಡ ರಾಹುಲ್ ಗಾಂಧಿಗೆ ‘ಪಪ್ಪು’ ಎನ್ನುವ ಶಬ್ದ ಬಳಕೆ ಮಾಡಿದ್ದಾರೆ. ಅಲ್ಲಿದ್ದ ಮಹಿಳೆಯೋರ್ವಳು ಇದನ್ನು ಖಂಡಿಸಿದ್ದಾಳೆ. ಅಷ್ಟೇ ಅಲ್ಲ, ಪಪ್ಪು ಎಂದ ನಾಯಕನಿಗೆ ತರಾಟೆ ತೆಗೆದುಕೊಂಡಿದ್ದಾಳೆ.
ಬಿಜೆಪಿ ಸಭೆಯಲ್ಲಿದ್ದ ಮಹಿಳೆ ಕಾಂಗ್ರೆಸ್ನವಳಿರಬಹುದು ಎನ್ನುವ ಅನುಮಾನ ಅನೇಕರಲ್ಲಿ ಕಾಡಿತ್ತು. ಆದರೆ, ಇದಕ್ಕೂ ಆಕೆ ಸ್ಪಷ್ಟನೆ ನೀಡಿದ್ದಾಳೆ! “ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಿ. ಅವರು ಪ್ರಧಾನಿಯಾಗೇ ಮುಂದುವರಿಯಬೇಕು. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ರಾಹುಲ್ ಗಾಂಧಿಗೆ ನೀವು ಪಪ್ಪು ಎನ್ನುವ ಶಬ್ದ ಏಕೆ ಬಳಕೆ ಮಾಡಿದಿರಿ?,” ಎಂದು ಪ್ರಶ್ನಿಸಿದ್ದಾಳೆ ಆ ಮಹಿಳೆ.
ಇದಕ್ಕೆ ಬಿಜೆಪಿ ನಾಯಕ, “ಎಲ್ಲರೂ ರಾಹುಲ್ಗೆ ಪಪ್ಪು ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ನಾನು ಕೂಡ ಪಪ್ಪು ಎಂದು ಹೇಳಿದೆ. ಅದರಲ್ಲೇನಿದೆ,” ಎಂದು ಉತ್ತರಿಸುವ ಮೂಲಕ ನುಣುಚಿಕೊಳ್ಳಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಜಗ್ಗದ ಮಹಿಳೆ, ತಮ್ಮ ವಾದ ಮುಂದುವರಿಸಿದಳು. “ರಾಹುಲ್ ಕೂಡ ಪ್ರಧಾನಿ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ. ಹೀಗಿರುವಾಗ ನಾವು ಹೇಗೆ ಅವರಿಗೆ ಪಪ್ಪು ಎನ್ನುವ ಶಬ್ದ ಬಳಕೆ ಮಾಡಲು ಸಾಧ್ಯ,” ಎಂದರು.
ಈ ವೇಳೆ ಅಲ್ಲಿ ನೆರೆದಿದ್ದವರೆಲ್ಲರೂ ಮೋದಿ ಪರ ಘೋಷಣೆ ಕೂಗುವ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಪಪ್ಪು ಎಂದು ಹೇಳಿದ ನಾಯಕನ ಬಳಿ ಕ್ಷಮೆಯಾಚಿಸುವಂತೆ ಮಹಿಳೆ ವಾದ ಮುಂದುವರಿಸಿದಳು.
Comments are closed.