ರಾಷ್ಟ್ರೀಯ

ವಾರಣಾಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಳಪೆ ಆಹಾರದ ಬಗ್ಗೆ ಆರೋಪಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್

Pinterest LinkedIn Tumblr

ವಾರಣಾಸಿ: ಸೇನೆಯಲ್ಲಿ ಸೈನಿಕರಿಗೆ ನೀಡುವ ಆಹಾರ ಕಳಪೆಯಾಗಿರುತ್ತದೆ ಎಂದು ಆರೋಪಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು, ‘ಹರ್ಯಾಣದ ರೇವಾರಿಯ ನಿವಾಸಿಯಾಗಿರುವ ತೇಜ್ ಬಹದ್ದೂರ್ ಯಾದವ್, ವಾರಣಾಸಿಯಲ್ಲಿ ತಾವು ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಹಲವು ಮಂದಿ ರಾಜಕಾರಣಿಗಳು ತಮ್ಮ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಆದರೆ ತಾನು ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕೆ ಇಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ತಮಗೆ ಚುನಾನಣೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ. ಆದರೆ ಚುನಾವಣೆ ಮುಖಾಂತರ ಯೋಧರ ಸಂಕಷ್ಟ ಅರ್ಥ ಮಾಡಿಕೊಳ್ಳದ ಮೋದಿ ಸರ್ಕಾರ ಮತ್ತು ಭದ್ರತಾ ಪಡೆಯ ಭ್ರಷ್ಟಾಚಾರಗಳ ವಿಚಾರವನ್ನು ಜನತೆಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

‘ನನ್ನ ಉದ್ದೇಶ ಗೆಲುವು ಅಥವಾ ಸೋಲು ಅಲ್ಲ.. ಭದ್ರತಾ ಪಡೆಯನ್ನು ಅದರಲ್ಲೂ ಮುಖ್ಯವಾಗಿ ಅರೆ ಮಿಲಿಟರಿ ಪಡೆಯನ್ನು ಹೇಗೆ ಸರ್ಕಾರ ವಿಫಲಗೊಳಿಸಿದೆ ಎಂದು ಬಿಂಬಿಸುವುದು ನನ್ನ ಉದ್ದೇಶ. ಮೋದಿ ನಮ್ಮ ಸೈನಿಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಅವರಿಗಾಗಿ ಮೋದಿ ಏನೂ ಮಾಡಿಲ್ಲ. ನಮ್ಮ ಅರೆ ಮಿಲಿಟರಿ ಪಡೆ ಜವಾನರು ಇತ್ತೀಚೆಗೆ ಪುಲ್ವಾಮಾ ದಾಳಿಯಲ್ಲಿ ಹತರಾಗಿದ್ದಾರೆ. ಇವರಿಗೆ ಸರ್ಕಾರ ಹುತಾತ್ಮರ ಸ್ಥಾನಮಾನ ಕೂಡಾ ನೀಡಿಲ್ಲ’ ಎಂದು ತೇಜ್ ಬಹದ್ದೂರ್ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರಿಗೆ ಕಳಪೆ ಆಹಾರ ವಿತರಿಸಲಾಗುತ್ತಿದೆ ಎಂದು ಆಪಾದಿಸಿದ್ದ ಅವರು ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದೇ ಕಾರಣಕ್ಕಾಗಿ 2017ರಲ್ಲಿ ಇವರು ಬಿಎಸ್‍ಎಫ್‍ನಿಂದ ವಜಾಗೊಂಡಿದ್ದರು. ಈ ವಜಾ ಆದೇಶವನ್ನು ಅವರು ಪ್ರಶ್ನಿಸಿದ್ದು, ಇದು ಇನ್ನೂ ವಿಚಾರಣೆ ಹಂತದಲ್ಲಿದೆ.

Comments are closed.