ರಾಷ್ಟ್ರೀಯ

ಮೋದಿ ಹತ್ಯೆ ಪಕ್ಕಾ, ಗುತ್ತಿಗೆ ಕೊಡುವಿರಾ?: ಫೇಸ್‌ಬುಕ್ ಪೋಸ್ಟ್ ಹಾಕಿದವನ ಬಂಧನ

Pinterest LinkedIn Tumblr


ಜೈಪುರ: ”ಯಾರಾದರೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಕಾಂಟ್ರಾಕ್ಟ್ ಕೊಡುವವರು ಇದ್ದೀರಾ? ನನ್ನ ಹತ್ತಿರ ಅತ್ಯಂತ ಕರಾರುವಕ್ಕಾದ ಪ್ಲ್ಯಾನ್‌ ಇದೆ,” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ವ್ಯಕ್ತಿಯನ್ನು ಗುರುವಾರ ಜೈಪುರ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ರೇವಾರಿ ನಿವಾಸಿಯಾಗಿರುವ ಮತ್ತು ಪ್ರಸಕ್ತ ತ್ರಿವೇಣಿ ನಗರದಲ್ಲಿ ವಾಸವಾಗಿರುವ ನವೀನ್‌ ಕುಮಾರ್‌ ಯಾದವ್‌ (31) ಎಂಬಾತನೇ ಬಂಧಿತ. ಸೈಬರ್‌ ಸೆಲ್‌ನ ಸಹಾಯದಿಂದ ಈತನನ್ನು ಬಂಧಿಸಲಾಯಿತು ಎಂದು ಡಿಸಿಪಿ ರಾಹುಲ್‌ ಜೈನ್‌ ತಿಳಿಸಿದ್ದಾರೆ.

ಮಾರ್ಚ್‌ 26ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದಾಗ ಸಾಕಷ್ಟು ಜನ ಆಕ್ಷೇಪಿಸಿದ್ದರು. ಅದರಿಂದ ಹೆದರಿದ ಆತ ಪೋಸ್ಟ್‌ ಡಿಲೀಟ್‌ ಮಾಡಿದ್ದ. ಮೋದಿ ಆಡಳಿತ ನಿರ್ವಹಣೆಯ ಬಗ್ಗೆ ಆಕ್ರೋಶವಿದ್ದ ಆತ ಹಿಂದೆಯೂ ಪ್ರಧಾನಿ ಬಗ್ಗೆ ನಕಾರಾತ್ಮಕ ಪೋಸ್ಟ್‌ಗಳನ್ನು ಹಾಕಿದ್ದ ಎನ್ನಲಾಗಿದೆ.

ತಪ್ಪೊಪ್ಪಿಕೊಂಡಿರುವ ಆತ ಮೋದಿ ಅವರ ಆಡಳಿತ ಮತ್ತು ಅವರು ನಂಬಿರುವ ಸಿದ್ಧಾಂತಗಳ ಬಗ್ಗೆ ನನಗೆ ಬೇಸರವಿದೆ. ಹೀಗಾಗಿ ಈ ಪೋಸ್ಟ್ ಹಾಕಿದೆ ಎಂದು ಹೇಳಿದ್ದಾನೆ ಎಂದು ಬಜಾಜ್ ನಗರ ಪೊಲೀಸ್ ಠಾಣೆಯ ಮನ್ವೇಂದರ್ ಸಿಂಗ್ ತಿಳಿಸಿದ್ದಾರೆ.

Comments are closed.