ರಾಷ್ಟ್ರೀಯ

ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯಿಂದ ಗೋವಾದ ಬಿಜೆಪಿ ಸರಕಾರಕ್ಕೆ ಬೆಂಬಲ ಹಿಂಪಡೆಯುವ ಬೆದರಿಕೆ!

Pinterest LinkedIn Tumblr


ಪಣಜಿ: ತಮ್ಮ ಪಕ್ಷವನ್ನು ನಾಶಪಡಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯು, ಬಿಜೆಪಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದು ಕಾಂಗ್ರೆಸ್‌ ಜತೆ ಕೈ ಜೋಡಿಸುವ ಬೆದರಿಕೆ ಹಾಕಿದೆ. ಹೀಗಾಗಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸರಕಾರಕ್ಕೆ ಶುರುವಿನಲ್ಲೇ ಆತಂಕ ಎದುರಾಗಿದೆ.

”ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಲಾವೂ ಮಾಮ್ಲತ್‌ದಾರ್‌ ಅವರು ಪಕ್ಷದ ಶಾಸಕಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಪೂರ್ಣ ಹೊಣೆಯನ್ನು ತಾವೇ ತೆಗೆದುಕೊಂಡಿರುವುದಾಗಿ ರಾಜ್ಯಪಾಲ ಮತ್ತು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಅಗತ್ಯ ಅನ್ನಿಸಿದರೆ ಸರಕಾರದಿಂದ ಹೊರಬರಲೂ ನಾವು ಹಿಂದೇಟು ಹಾಕುವುದಿಲ್ಲ,” ಎನ್ನುವ ಮೂಲಕ ಪಕ್ಷದ ಅಧ್ಯಕ್ಷ ದೀಪಕ್‌ ಧವಳೀಕರ್‌ ಪರೋಕ್ಷವಾಗಿ ಬಿಜೆಪಿಯತ್ತ ಬೊಟ್ಟು ಮಾಡಿದ್ದಾರೆ. ಬುಧವಾರ ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿರುವ ಅವರು, ಪ್ರಸಂಗ ಬಂದರೆ ಕಾಂಗ್ರೆಸ್‌ಗೆ ಬೆಂಬಲ ನೀಡಲೂ ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ.

ಮಾಮ್ಲತ್‌ದಾರ್‌ ಕಳೆದ ವಾರ ಈ ಪತ್ರ ಬರೆದಿದ್ದಾರೆ. ಅದು ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಹಾಲಿ 36 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 12 ಶಾಸಕರನ್ನು ಹೊಂದಿರುವ ಬಿಜೆಪಿಗೆ ತಲಾ ಮೂವರು ಶಾಸಕರು ಇರುವ ಎಂಜಿಪಿ ಮತ್ತು ಗೋವಾ ಫಾರ್ವರ್ಡ್‌ ಪಾರ್ಟಿ, ಮೂವರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ 14 ಶಾಸಕರನ್ನು ಹೊಂದಿದ್ದು, ಎನ್‌ಸಿಪಿಯ ಒಬ್ಬ ಶಾಸಕ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ.

Comments are closed.