ರಾಷ್ಟ್ರೀಯ

ನಾಲ್ಕು ಅತ್ಯಾಧುನಿಕ ಚಿನೂಕ್ ಹೆಲಿಕಾಪ್ಟರ್‌ಗಳು ವಾಯುಪಡೆಗೆ ಸೇರ್ಪಡೆ

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಸೋಮವಾರ 4 ಅತ್ಯಾಧುನಿಕ ಚಿನೂಕ್-47 ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗಿವೆ. ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಬಿ.ಎಸ್ ಧನೋವಾ ಅವರು ಅತಿ ಹೆಚ್ಚು ಭಾರ ಹೊರಬಲ್ಲ ಈ ಅತ್ಯಾಧುನಿಕ ಸಾಗಣೆ ಹೆಲಿಕಾಪ್ಟರ್‌ಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಿಕೊಂಡರು.

15 ಸಿಎಚ್‌47 ಚಿನೂಕ್ ಹೆಲಿಕಾಪ್ಟರ್‌ಗಳಿಗೆ ಭಾರತ ಒಟ್ಟು 150 ಕೋಟಿ ಡಾಲರ್‌ ಪಾವತಿ ಮಾಡಿದೆ. ಭಾರತ-ಪಾಕ್‌ ನಡುವಣ ಅತಿ ಎತ್ತರದ ಪರ್ವತ ಗಡಿ ಪ್ರದೇಶಗಳಲ್ಲಿ ಯೋಧರು ಮತ್ತು ಯಂತ್ರ ಸಾಮಗ್ರಿಗಳನ್ನು ಹೊತ್ತೊಯ್ಯಲು ಈ ಹೆಲಿಕಾಪ್ಟರ್‌ಗಳು ಬಳಕೆಯಾಗಲಿವೆ.

ಚಿನೂಕ್ ಹೆಲಿಕಾಪ್ಟರ್‌ಗಳ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:

* ಬಹು ಕಾರ್ಯ ನಿರ್ವಹಿಸಬಲ್ಲ ಅತಿ ಭಾರ ಹೊರುವ ಸಾಮರ್ಥ್ಯವಿರುವ ಚಿನೂಕ್ ಹೆಲಿಕಾಪ್ಟರ್‌ಗಳು ಯೋಧರು, ಆರ್ಟಿಲರಿ, ಮದ್ದುಗುಂಡುಗಳು, ತಡೆಬೇಲಿ ಸಲಕರಣೆಗಳು, ಯುದ್ಧಭೂಮಿ ಸಲಕರಣೆಗಳ ಸಾಗಣೆಗೆ ಬಳಕೆಯಾಗಲಿವೆ.

* ದುರ್ಗಮ ಗುಡ್ಡ ಬೆಟ್ಟಗಳ ಪ್ರದೇಶದಲ್ಲೂ ಸುಗಮವಾಗಿ ಕಾರ್ಯನಿರ್ವಹಿಸುವ ಅತ್ಯಂತ ಕಠಿಣ ಪರಿಶ್ರಮಿ ಹೆಲಿಕಾಪ್ಟರ್ ಇದಾಗಿದೆ.

* 24×7, ಎಲ್ಲ ಹವಾಮಾನಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಈ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಗೆ ಅಗತ್ಯವಾಗಿ ಬೇಕಾಗಿದ್ದವು.

* ಮಿಲಿಟರಿ ಕಾರ್ಯಾಚರಣೆಯ ಹೊರತಾಗಿ, ವೈದ್ಯಕೀಯ ತೆರವು ಕಾರ್ಯಾಚರಣೆ, ದುರಂತ ನಿರ್ವಹಣೆ, ಶೋಧ ಮತ್ತು ಪತ್ತೆ ಕಾರ್ಯಾಚರಣೆ, ಅಗ್ನಿಶಾಮಕ ಕಾರ್ಯಾಚರಣೆ ಮತ್ತು ನಾಗರಿಕ ಅಭಿವೃದ್ಧಿ ಕಾರ್ಯಾಚರಣೆಗಳಿಗೂ ಬಳಕೆಗೆ ಯೋಗ್ಯವಾಗಿದೆ.

* ಪೂರ್ಣ ಪ್ರಮಾಣದ ಯುದ್ಧ ಸನ್ನದ್ಧ ಪದಾತಿ ದಳದ ಸೈನಿಕರನ್ನು ವಿಶೇಷ ಕಾರ್ಯಾಚರಣೆಗಳಿಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಡಿಜಿಟಲ್‌ ಕಾಕ್‌ಪಿಟ್‌ ನಿರ್ವಹಣಾ ವ್ಯವಸ್ಥೆ ಹೊಂದಿದೆ.

* ಗರಿಷ್ಠ 11 ಟನ್ ತೂಕದ ಸರಕುಗಳು ಮತ್ತು 45 ಮಂದಿ ಯೋಧರನ್ನು ಒಟ್ಟಿಗೇ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. 10 ಟನ್‌ ತೂಕದ ಸರಕುಗಳನ್ನು ನೇತಾಡಿಸಿಕೊಂಡೂ ಒಯ್ಯಬಲ್ಲ ಶಕ್ತಿ ಇದಕ್ಕಿದೆ.

* ಎಂ-777 ಅತಿ ಹಗುರ ಹೊವಿಟ್ಝರ್ ತೋಪುಗಳನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.

* ಒಟ್ಟು 15 ಚಿನೂಕ್ ಹೆಲಿಕಾಪ್ಟರ್‌ಗಳ ಪೈಕಿ 4 ಹೆಲಿಕಾಪ್ಟರ್‌ಗಳು ಇದೀಗ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದು, 8,048 ಕೋಟಿ ರೂ ಮೊತ್ತದ ಖರೀದಿ ಆದೇಶವನ್ನು ಬೋಯಿಂಗ್‌ಗೆ 2015ರ ಸೆಪ್ಟೆಂಬರ್‌ನಲ್ಲಿ ನೀಡಲಾಗಿತ್ತು. ಚಂಡೀಗಢದಲ್ಲಿರುವ ವಾಯುಪಡೆಯ 126 ಹೆಲಿಕಾಪ್ಟರ್‌ಗಳ ಘಟಕಕ್ಕೆ ಈ ಹೆಲಿಕಾಪ್ಟರ್‌ಗಳನ್ನು ಸೇರಿಸಿಕೊಳ್ಳಲಾಯಿತು.

ಚಿನೂಕ್ ಹೆಲಿಕಾಪ್ಟರ್‌ ಒಳನೋಟ

* 15 ಚಿನೂಕ್‌ಗಳ ಸಂಪೂರ್ಣ ಪಡೆ 2020ರ ಮಾರ್ಚ್‌ ವೇಳೆಗೆ ಭಾರತಕ್ಕೆ ಲಭ್ಯವಾಗಲಿದೆ. ಎರಡನೇ ಕಂತಿನ ಚಿನೂಕ್ ಹೆಲಿಕಾಪ್ಟರ್‌ಗಳು ಶೀಘ್ರವೇ ಭಾರತಕ್ಕೆ ತಲುಪಲಿದ್ದು, ಅವುಗಳನ್ನು ಅಸ್ಸಾಂನ ದಿಂಜನ್ ಘಟಕದಲ್ಲಿ ಇರಿಸಲಾಗುವುದು. ಪೂರ್ವದ ಗಡಿಗಳನ್ನು ಸುಭದ್ರಗೊಳಿಸಲಿವೆ.

Comments are closed.