ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕ ಸೇರಿದಂತೆ ಅನೇಕ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಣರಾಜ್ಯೋತ್ಸವ ಸಮಾರಂಭದ ದಿನ 112 ಮಂದಿಗೆ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಘೋಷಣೆಯಾದ 112 ಮಂದಿಯಲ್ಲಿ 47 ಗಣ್ಯರಿಗೆ ಮಾರ್ಚ್ 11 ರಂದು ಪದ್ಮ ಪ್ರಶಸ್ತಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಇನ್ನುಳಿದ ಗಣ್ಯರಿಗೆ ಇಂದು ನಡೆದ ಸಮಾರಂಭದಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹಣೆಯನ್ನು ಸ್ಪರ್ಶಿಸಿ ಆಶೀರ್ವದಿಸಿದ5ರು. ಈ ಘಟನೆ ಅಲ್ಲಿಯೇ ನೆರೆದಿದ್ದ ಗಣ್ಯರ ಗಮನವನ್ನು ಸೆಳೆಯಿತು. ರಾಷ್ಟ್ರಪತಿ ಭವನದ ಕಟ್ಟುನಿಟ್ಟಿನ ಶಿಷ್ಟಾಚಾರವು ತಿಮ್ಮಕ್ಕನವರ ಈ ವಾತ್ಸಲ್ಯಮಯಿ ನಡೆಗೆ ಅಡ್ಡಿಯಾಗಲಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ತುಂಬಾ ಹೆಮ್ಮೆ ಎನಿಸಿತು ತಾಯಿ, ನಿಮಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಯಾದಾಗ. ಹಾಗೆಯೇ ನೀವು ಪ್ರಶಸ್ತಿ ಸ್ವೀಕರಿಸುವಾಗ ಸಹ ಸಮಸ್ತ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದಿರಿ. ಎಷ್ಟು ಜನ ಪ್ರಸ್ತುತ ವಿದ್ಯಮಾನದ ಸಮಯದಲ್ಲಿ ನಿಮ್ಮ ಹಾಗೂ ನಿಮಗೆ ಬಂದ ಪ್ರಶಸ್ತಿ ಬಗ್ಗೆ ಗಮನ ಹರಿಸಿ ಸಂಭ್ರಮಿಸಿದ್ದಾರೆ ಅನ್ನುವುದು ಗೊತ್ತಿಲ್ಲ. ಆದರೆ ನೀವು ಎಲ್ಲ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದಿರಿ. ತಾಯಿ ನಿಮಗೊಂದು ಸಲಾಂ ಎಂದು ಬರೆದುಕೊಂಡಿದ್ಧಾರೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ನಟ ಮನೋಜ್ ಬಾಜಪೇಯಿ, ಮಹಿಳಾ ಸಾಹಸಿ ಪರ್ವತಾರೋಹಿ ಬಚೇಂದ್ರಿ ಪಾಲ್, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಮತ್ತು ಒಡಿಶಾ ಟೀ ಮಾರಾಟಗಾರ ಡಿ. ಪ್ರಕಾಶ್ ರಾವ್ ಸೇರಿದಂತೆ 65 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾರ್ಚ್ 11ರಂದು ಚಿತ್ರನಟ ಪ್ರಭುದೇವ, ಸಂಗೀತ ನಿರ್ದೇಶಕ ಶಂಕರ್ ಮಹದೇವನ್, ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಪ್ರಾಚ್ಯ ವಸ್ತು ತಜ್ಞರಾದ ಚಕ್ರವತಿ ಮತ್ತು ಹೆಸರಾಂತ ಹೆಮಾಟಾಲಜಿಸ್ಟ್ ಮೊಮೆನ್ ಚಾಂಡಿ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಮಹಾರಾಷ್ಟ್ರದ ರಂಗಕರ್ಮಿ ಬಾಬಾಸಾಹೇಬ್ ಪುರಂದರೆ ಯಾನೆ ಬಲ್ವಂತ್ ಮೊರೇಶ್ವರ್ ಪುರಂದರೆ (ಪದ್ಮವಿಭೂಷಣ), ಬಿಹಾರದ ಹುಕುಂದೇವ್ ನಾರಾಯಣ್ ಯಾದವ್ (ಪದ್ಮಭೂಷಣ), ತಂತ್ರಜ್ಞಾನ ಕ್ಷೇತ್ರ ದೈತ್ಯ ಬಹುರಾಷ್ಟ್ರೀಯ ಕಂಪನಿ ಸಿಸ್ಕೊ ಸಿಸ್ಟಮ್ನ ಸಿಇಒ ಜಾನ್ ಛೇಂಬರ್ಸ್, ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅವರನ್ನು ರಾಷ್ಟ್ರಪತಿ ಗೌರವಿಸಿದ್ದರು.
Comments are closed.