ಹೊಸದಿಲ್ಲಿ: ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧೋನ್ಮಾದ ಪರಿಸ್ಥಿತಿ ಏರ್ಪಟ್ಟಿರುವ ನಡುವೆಯೇ ರಕ್ಷಣಾ ಸಚಿವಾಲಯ 10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ಮುಂದಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ, ಮಿಲಿಟರಿ ವಿಭಾಗದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಭಾರತೀಯ ಸಂಸ್ಥೆಯೊಂದರಿಂದ 10 ಲಕ್ಷ ಮಲ್ಟಿ ಮೋಡ್ ಹ್ಯಾಂಡ್ ಗ್ರೆನೇಡ್ ಖರೀದಿಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಸೇನೆಯ ಬಳಿ ಇರುವ ಎಚ್‌ಇ-36 ಗ್ರೆನೇಡ್‌ಗಳ ಬದಲಾಗಿ ಡಿಆರ್‌ಡಿಒ ಹಾಗೂ ಪ್ರೊಡಕ್ಷನ್ ಏಜೆನ್ಸಿಯಿಂದ ತಯಾರಿಸಲ್ಪಟ್ಟ ಹೊಸ ಮಲ್ಟಿ ಮೋಡ್ ಹ್ಯಾಂಡ್ ಗ್ರೆನೇಡ್‌ಗಳ ಖರೀದಿಗೆ ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.
ಭಾರತೀಯ ಸೇನಾ ಪಡೆಗೆ ಅಗತ್ಯವಾದ ಶಸ್ತ್ರಾಸ್ತ್ರ ಖರೀದಿಗೆ ಆದ್ಯತೆ ನೀಡಿರುವ ಕೇಂದ್ರ ಸರಕಾರ, ಈಗಾಗಲೇ ಅತ್ಯಾಧುನಿಕ ರೈಫಲ್‌ಗಳ ಖರೀದಿ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದೆ. 500 ಕೋಟಿ ರೂ,ಗೂ ಹೆಚ್ಚಿನ ಮೊತ್ತದ ಒಪ್ಪಂದ ಇದಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿದೆ.
ಇದಲ್ಲದೆ 75000 ಸಿಗ್ ಅಸಲ್ಟ್ ರೈಫಲ್‌ಗಳ ಖರೀದಿಗೆ ಅಮೆರಿಕ ಮೂಲದ ಕಂಪನಿ ಜತೆಗೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ ರಷ್ಯಾದ ಸಂಸ್ಥೆಯ ಪಾಲುದಾರಿಕೆಯೂ ಇದ್ದು, ಅತ್ಯಾಧುನಿಕ ಎಕೆ-203 ರೈಫಲ್‌ಗಳ ಸೇನೆಗೆ ಸೇರಿಸಲು ಸಿದ್ದತೆ ನಡೆಸಲಾಗಿದೆ.
ಪುಲ್ವಾಮಾ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದ್ದು, ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸಲು ಭಾರತ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಮಾಡಿತ್ತು. ಅಲ್ಲದೆ ಬಾಲಕೋಟ್‌ನಲ್ಲಿ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕರ ಅಡುಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು.
Comments are closed.