ರಾಷ್ಟ್ರೀಯ

ತನ್ನ ತಾಯಿ ನಿಧನಕ್ಕೆ ಖುಷಿ ಪಟ್ಟ ಹೆಂಡತಿಯ ಹತ್ಯೆ ಮಾಡಿದ ಪತಿ!

Pinterest LinkedIn Tumblr


ಇಚಲಕರಂಜಿ (ಮಹಾರಾಷ್ಟ್ರ): ಕೊಲ್ಲಾಪುರದ ಅಪ್ಟೆ ನಗರದಲ್ಲಿ ವಾಸವಿದ್ದ, ಮೂಲತಃ ಸಾಂಗಲಿ ಜಿಲ್ಲೆಯ ಬಾಗಣಿ ಗ್ರಾಮದ ಶುಭಾಂಗಿ ಸಂದೀಪ ಲೋಖಂಡೆ (35) ಎಂಬುವವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಪತಿಯೇ ಕೊಲೆ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸಂದೀಪ ಲೋಖಂಡೆ ಕೊಲೆ ಮಾಡಿದ ಆರೋಪಿ.

ಅನೇಕ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದ ಶುಭಾಂಗಿ ಅತ್ತೆ ಕ್ಯಾನ್ಸರ್ ಪೀಡಿತೆ ಮಾಲತಿ ಮಧುಕರ ಲೋಖಂಡೆ (70 ಶನಿವಾರ ಮುಂಜಾನೆ ನಿಧನ ಹೊಂದಿದ್ದರು. ಅತ್ತೆ ತೀರಿಕೊಂಡ ಸುದ್ದಿ ಕೇಳಿ ಸೊಸೆ ಶುಭಾಂಗಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅತ್ತೆ- ಸೊಸೆ ಬಹಳ ಅನ್ಯೋನ್ಯವಾಗಿದ್ದು, ಅಗಲಿಕೆ ಸಹಿಸದೇ ಪತ್ನಿ ಸಾವಿಗೆ ಶರಣಾಗಿದ್ದಾಳೆ ಎಂದು ಪತಿ ಸಂದೀಪ ತಿಳಿಸಿದ್ದ. ಪೊಲೀಸರು ಕೂಡ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಪೊಲೀಸರು ಮೃತಳ ಪತಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಅತ್ತೆಯ ಸಾವಿನಿಂದ ದುಃಖ ಸಹಿಸದೆ ಸೊಸೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಅತ್ತೆ ತೀರಿಕೊಂಡ ಸುದ್ದಿ ತಿಳಿದು ಸಂತಸ ವ್ಯಕ್ತಪಡಿಸಿದ್ದರಿಂದ ಪತ್ನಿಯನ್ನು ಮೂರು ಅಂತಸ್ತಿನ ಬಂಗಲೆಯಿಂದ ನೂಕಿ ಹತ್ಯೆಗೈದಿರುವುದಾಗಿ ಆರೋಪಿ ಸಂದೀಪ ಒಪ್ಪಿಕೊಂಡಿದ್ದಾನೆ.

ಶನಿವಾರ ಮುಂಜಾನೆ ಅತ್ತೆ ಮಾಲತಿ ಸಾವನ್ನಪ್ಪಿದಾಗ ಶುಭಾಂಗಿ ಬಹಳ ಸಂತೋಷವಾಗಿದ್ದಾಳೆ. ತನ್ನ ಭಾವನೆಯನ್ನು ಬಚ್ಚಿಡಲು ಅಸಮರ್ಥಳಾದ ಆಕೆ ಬಹಿರಂಗವಾಗಿ ಖುಷಿಯನ್ನು ವ್ಯಕ್ತ ಪಡಿಸಿದ್ದಳು. ಪತ್ನಿಯ ಈ ವರ್ತನೆಯಿಂದ ಕೋಪಗೊಂಡ ಪತಿ ಕೋಪದ ಭರದಲ್ಲಿ ಆಕೆಯನ್ನು ಸಾಯಿಸಿದ್ದಾನೆ.

ಆರೋಪಿಯನ್ನು ಕೊಲ್ಲಾಪುರದ ರಾಜವಾಡ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.