ರಾಷ್ಟ್ರೀಯ

ಕೊಹ್ಲಿ ಪಡೆಗೆ ಮುಖಭಂಗ; ಸರಣಿ ಗೆದ್ದ ಕಾಂಗರೂ ಪಡೆ

Pinterest LinkedIn Tumblr


ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 50 ಓವರ್ ಗಳಲ್ಲಿ 237 ರನ್ ಗಳಿಗೆ ಅಲೌಟ್ ಅಯ್ತು. 35 ರನ್ ಗೆಲುವು ಪಡೆದ ಆಸೀಸ್ ಪಡೆ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದು ಬೀಗಿತು.

ಆಸೀಸ್ ನೀಡಿದ್ದ 273 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ದು ಹೊರತು ಪಡಿಸಿದರೆ, ಕೊಹ್ಲಿ 20 ರನ್, ಧವನ್ 12 ರನ್, ಪಂತ್ ಹಾಗೂ ವಿಜಯ್ ಶಂಕರ್ ತಲಾ 16 ರನ್ ಗಳಿಸಿದರೆ ಜಡೇಜಾ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಟೀಂ ಇಂಡಿಯಾ 28.5 ಓವರ್ ಗಳಲ್ಲಿ 132 ರನ್ ಗಳಿಗೆ 6 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ತಂಡ ಗೆಲುವಿಗೆ 21 ಓವರ್ ಗಳಲ್ಲಿ 141 ರನ್ ಅಗತ್ಯವಿದ್ದ ವೇಳೆ ಒಂದಾದ ಕೇದಾರ್ ಜಾಧವ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ತಂಡವನ್ನು ಗೆಲುವಿನ ಸನಿಹ ತರಲು ಪ್ರಯತ್ನಿಸಿದರು. ಈ ಜೋಡಿ 95 ಎಸೆತಗಳಲ್ಲಿ 91 ರನ್ ಜೊತೆಯಾಟ ನೀಡಿತು. ಈ ವೇಳೆ ಗೆಲುವಿನ ಆಸೆ ಮೂಡಿಸಿದ್ದ ಜೋಡಿಯನ್ನು ಕಮ್ಮಿನ್ಸ್ ಬೇರ್ಪಡಿಸಲು ಯಶಸ್ವಿಯಾದ್ರು. 54 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೊಂದಿಗೆ 46 ರನ್ ಗಳಿಸಿದ್ದ ಭುವನೇಶ್ವರ್ ಕುಮಾರ್ ಫಿಂಚ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 57 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಗಳಿಂದ 44 ರನ್ ಗಳಿಸಿದ್ದ ಜಾಧವ್ ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಆಸೆ ಬಹುತೇಕ ಅಂತ್ಯವಾಯ್ತು. ಅಂತಿಮವಾಗಿ ತಂಡ 237 ರನ್ ಗಳಿಗೆ ಅಲೌಟ್ ಆಯ್ತು. ಆಸೀಸ್ ಪರ ಜಂಪಾ 3 ವಿಕೆಟ್ ಪಡೆದರೆ, ಕಮ್ಮಿನ್ಸ್ ಮತ್ತು ರಿಚಡ್ರ್ಸನ್ ತಲಾ 2 ವಿಕೆಟ್ ಹಾಗೂ ಸ್ಟೋಯಿನ್ಸ್, ಲಯನ್ ತಲಾ ವಿಕೆಟ್ ಪಡೆದರು.

8 ಸಾವಿರ ರನ್: ಪಂದ್ಯದಲ್ಲಿ ರೋಹಿತ್ ಶರ್ಮಾ 46 ರನ್ ಗಳಿಸಿದ್ದ ವೇಳೆ ಏಕದಿನ ಕ್ರಿಕೆಟಿನಲ್ಲಿ 8 ಸಾವಿರ ರನ್ ಪೂರೈಸಿದರು. ಆ ಮೂಲಕ ಭಾರತ ಪರ ವೇಗವಾಗಿ 8 ಸಾವಿರ ರನ್ ಪೂರೈಸಿದ 3ನೇ ಆಟಗಾರ ಎನಿಸಿಕೊಂಡರು. ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರು ವೇಗವಾಗಿ 8 ಸಾವಿರ ರನ್ ಪೂರೈಸಿದ ಮೊದಲ ಎರಡು ಸ್ಥಾನ ಪಡೆದಿದ್ದಾರೆ. 31 ವರ್ಷದ ರೋಹಿತ್ ಶರ್ಮಾ 200 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಖವಾಜಾ ಶತಕ ಸಿಡಿಸಿದರೆ, ಹ್ಯಾಡ್ಸ್ ಕಂಬ್ 52 ರನ್ ಸಿಡಿಸಿ ಆಸೀಸ್ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸರಣಿಯಲ್ಲಿ 366 ರನ್ ಗಳಿಸಿದ ಖವಾಜಾ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ವಿಲಿಯಮ್ಸನ್ 361 ಹಾಗೂ 2015 ರಲ್ಲಿ ಎಬಿ ಡಿವಿಲಿಯರ್ಸ್ 358 ರನ್ ಹೊಡೆದಿದ್ದರು.

Comments are closed.