ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಪಕ್ಷ ಕಟ್ಟುವ ಕೆಲಸಕ್ಕೆ ನಿಂತ ಜ್ಯೋತಿರಾದಿತ್ಯ ಸಿಂಧಿಯಾ ಯಾರು?

Pinterest LinkedIn Tumblr


ನವದೆಹಲಿ: ಬಿಜೆಪಿ ಭದ್ರಕೋಟೆಯನ್ನು ಮಧ್ಯಪ್ರದೇಶ ಬೇಧಿಸಿ ಕಾಂಗ್ರೆಸ್​ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪಾತ್ರ ಅಪಾರ. ಕಾಂಗ್ರೆಸ್ಸಿಗ ಮಾಧವ​ ರಾವ್​ ಅವರ ಮಗನಾದ ಜ್ಯೋತಿರಾಧಿತ್ಯ ಸಿಂಧಿಯಾ ಪಕ್ಷದಲ್ಲಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಂಧಿಯಾಗೆ ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಗಿದೆ. ಕಾಂಗ್ರೆಸ್​ನ ನಿಷ್ಠಾವಂತ ನಾಯಕರಾಗಿರುವ ಇವರು ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಯಾವ ರೀತಿ ಜಾದು ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ರಾಜಮನೆತನದಲ್ಲಿ ಹುಟ್ಟಿ ಬೆಳೆದ ಜ್ಯೋತಿರಾದಿತ್ಯ ಸಿಂಧಿಯಾ ಹಾವರ್ಡ್​ ವಿವಿಯಿಂದ ಅರ್ಥಶಾಸ್ತ್ರ ಪದವಿ ಹಾಗೂ ಸ್ಟಾನ್ಡ್​ ಫೋರ್ಡ್​ ಗ್ರ್ಯಾಜುಯೆಟ್​ ಸ್ಕೂಲ್​ ಆಫ್​ ಬಿಸಿನೆಸ್​ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರ ತಂದೆ ಮಾಧವ ರಾವ್​ ಸಿಂಧಿಯಾ ವಿಮಾನ ಅಪಘಾತದಲ್ಲಿ ನಿಧನರಾದ ಬಳಿಕ ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶಿಸಿದ ಇವರು ಇಂದು ಪ್ರಬಲ ನಾಯಕರಾಗಿ ಪಕ್ಷದಲ್ಲಿ ಬೆಳೆದು ನಿಂತಿದ್ದಾರೆ.

ಹಣ ಬಲದ ಜೊತೆಗೆ ಚುರುಕುತನ, ನಾಯಕತ್ವ ಗುಣ ಹೊಂದಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಸ್ವಂತ ಬಲದಿಂದಲೇ ಪಕ್ಷದಲ್ಲಿ ವರ್ಚಸ್ಸು ಸಂಪಾದಿಸಿ, ಹೈಕಮಾಂಡ್​ಗೆ ಆಪ್ತರಾದವರು. ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರ ಸಾಮರ್ಥ್ಯ ಇತ್ತೀಚೆಗೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸಾಬೀತಾಗಿತ್ತು. ಮುಖ್ಯಮಂತ್ರಿ ಹುದ್ದೆಯ ರೇಸ್​ನಲ್ಲಿದ್ದ 48 ವರ್ಷದ ಸಿಂಧಿಯಾಗೆ ಪಕ್ಷ ಈಗ ಲೋಕಸಭಾ ಚುನಾವಣೆ ಜವಬ್ದಾರಿಯನ್ನು ಹೊರಿಸಿದೆ. ಮಧ್ಯಪ್ರದೇಶ ರಾಜಕಾರಣದಲ್ಲಿ ಸಿಂಧಿಯಾಗಿಂತ ಹಿರಿಯರಾಗಿರುವ ಕಮಲನಾಥ್​ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ.

ಸಿಂಧಿಯಾ ಮುಂದಿದೆ ಭಾರೀ ಸವಾಲು:

ಪಶ್ಚಿಮ ಉತ್ತರ ಪ್ರದೇಶದ ಜವಬ್ದಾರಿ ಪಡೆದಿರುವ ಸಿಂಧಿಯಾ ಮುಂದೆ ಭಾರೀ ಸವಾಲು ಎದುರಾಗಿದೆ. ಕಾರಣ 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಈ ಪ್ರದೇಶದಲ್ಲಿ ಒಂದು ಕ್ಷೇತ್ರಗಳಲ್ಲಿಯೂ ಖಾತೆಯನ್ನು ತೆರೆದಿಲ್ಲ. ಪ್ರಿಯಾಂಕ ಗಾಂಧಿ ಜೊತೆಯಲ್ಲಿ ಸಿಂಧಿಯಾರಿಗೂ ಕೂಡ ಉತ್ತರ ಪ್ರದೇಶದ ಜವಬ್ದಾರಿ ನೀಡಿರುವ ಪಕ್ಷ ಇಬ್ಬರ ಸಾಮರ್ಥ್ಯದ ಮೇಲೆ ಅಗಾಧ ವಿಶ್ವಾಸವನ್ನು ಹೊಂದಿದೆ. ಈ ಇಬ್ಬರು ನಾಯಕರು ತಮ್ಮ ಕಾಂಗ್ರೆಸ್​ನ ನೈಜ ಚಿಂತನೆಯನ್ನು ಹರಡುವ ಮೂಲಕ ಉತ್ತರ ಪ್ರದೇಶದ ರಾಜಕೀಯವನ್ನು ಬದಲು ಮಾಡುತ್ತಾರೆ ಎಂದು ನಂಬಿಕೆ ಪಕ್ಷಕ್ಕಿದೆ.

ಮಧ್ಯಪ್ರದೇಶದಲ್ಲಿ ಜಾದು ಮಾಡಿದ ಸಿಂಧಿಯಾ:

15 ವರ್ಷಗಳ ಬಿಜೆಪಿ ಆಡಳಿತವಿದ್ದ ಮಧ್ಯಪ್ರದೇಶದಲ್ಲಿ ಸತತ 110 ಸಮಾವೇಶ ಮತ್ತು 12 ರೋಡ್​ ಶೋ ನಡೆಸುವ ಮೂಲಕ ಕಾಂಗ್ರೆಸ್​ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಕಮಲನಾಥ್​ ಸಿಎಂ ಆಗಲು ವಿರೋಧವನ್ನು ವ್ಯಕ್ತಪಡಿಸಿದ್ದರು. ಮಧ್ಯಪ್ರದೇಶದಲ್ಲಿ ಕಮಲನಾಥ್​ ಹಾಗೂ ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ಗಿಂತ ಹೆಚ್ಚು ಕಾಲ ರಾಜ್ಯದಲ್ಲಿ ನಾನು ಮತ್ತು ಪೈಲಟ್​ ಶ್ರಮಿಸಿದ್ದೇವೆ. ನಾನು ಪಕ್ಷದ ನಿರ್ಧಾರಕ್ಕೆ ತಲೆಬಾಗುತ್ತಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇನ್ನಷ್ಟು ರಾಜಕೀಯ ಚಟುವಟಿಕೆ ಬಿರುಸುಗೊಳಿಸಿರುವ ಸಿಂಧಿಯಾಗೆ ಪಶ್ಚಿಮ ಉತ್ತರಪ್ರದೇಶದ 39 ಕ್ಷೇತ್ರಗಳ ಜವಾಬ್ದಾರಿ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್​ರ ನಾಡಿನಲ್ಲಿ ಸಿಂಧಿಯಾ ಯಾವ ರೀತಿ ಜಾದು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.