ರಾಷ್ಟ್ರೀಯ

ಪಾಕ್ ಅಭಿನಂದನ್​ರನ್ನು ಗೌರವಯುತವಾಗಿ ನಡೆಸಿಕೊಂಡಿತೇ?

Pinterest LinkedIn Tumblr


ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಹಸ್ತಾಂತರಗೊಂಡಿರುವ ವಾಯುಸೇನೆಯ ವಿಂಗ್ ಕಮಾಂಡರ್​ ಅಭಿನಂದನ್​ ವರ್ಥಮಾನ್​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 60 ಗಂಟೆಗಳ ಕಾಲ ಪಾಕ್​ ವಶದಲ್ಲಿದ್ದ ಅವರು ತೀವ್ರ ನೋವು ಅನುಭವಿಸಿದ್ದರಂತೆ. ಅವರ ದೇಹಕ್ಕೆ ಉಂಟಾಗಿರುವ ಘಾಸಿಗೆ ಇನ್ನೂ ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲೇ ಕಾಲ ಕಳೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತಕ್ಕೆ ಅಭಿನಂದನ್​ ಹಸ್ತಾಂತರಗೊಂಡ ನಂತರ ಅವರನ್ನು ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ಪಕ್ಕೆಲುಬಿಗೆ ಪೆಟ್ಟಾಗಿರುವುದು ತಿಳಿದು ಬಂದಿದೆ. ಪಾಕಿಸ್ತಾನದ ನಾಗರಿಕರು ಅಭಿನಂದನ್​ ಅವರನ್ನು ಹಿಡಿದು ಥಳಿಸಿದ್ದರು. ಈ ವೇಳೆ ಅವರ ದೇಹಕ್ಕೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ.

ವೈರಿ ರಾಷ್ಟ್ರಗಳ ಚಲನವಲನ ಪತ್ತೆ ಹಚ್ಚಲು ಬಂಧನಕ್ಕೊಳಗಾದ ವ್ಯಕ್ತಿಯ ದೇಹದಲ್ಲಿ ಟ್ರ್ಯಾಕಿಂಗ್​ ವಸ್ತುಗಳನ್ನು ಇಟ್ಟ ಸಾಕಷ್ಟು ಉದಾಹರಣೆಗಳಿವೆ. ಆದರೆ, ಅಭಿನಂದನ್​ಗೆ ಆ ರೀತಿ ಏನು ಮಾಡಿರಲಿಲ್ಲ ಎಂಬುದು ತಾಪಸಣೆ ವೇಳೆ ತಿಳಿದು ಬಂದಿದೆ.

ಅಲ್ಲಿನ ಸೇನೆಯ ವಶದಲ್ಲಿದ್ದ ವೇಳೆ ಅಭಿನಂದನ್​ ಮಾತನಾಡಿದ ವಿಡಿಯೋ ಒಂದನ್ನು ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿತ್ತು. “ಪಾಕಿಸ್ತಾನ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಭಾರತ ಕೂಡ ಇದೇ ರೀತಿ ನಡೆದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ,” ಎಂದು ಅಭಿನಂದನ್​ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಆದರೆ, ಪಾಕಿಸ್ತಾನ ನಿಜಕ್ಕೂ ಅವರನ್ನು ಚೆನ್ನಾಗಿ ನೋಡಿಕೊಂಡಿರಲಿಲ್ಲ. ಮಾನಸಿಕ ಹಿಂಸೆ ನೀಡುವ ಮೂಲಕ ಪಾಕ್​ ಅಭಿನಂದನ್​ ಅವರಿಂದ ಈ ಹೇಳಿಕೆ ಪಡೆದುಕೊಂಡಿತ್ತು. ಆದರೆ, ಅವರಿಗೆ ದೈಹಿಕವಾಗಿ ಯಾವುದೇ ಹಿಂಸೆ ನೀಡಿರಲಿಲ್ಲ. ಈ ವಿಚಾರ ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಅಭಿನಂದನ್​ ಅವರು ಸದ್ಯ ವಾಯುಸೇನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಅವರಿಗೆ ಚಿಕಿತ್ಸೆ ಮುಂದುವರಿಯಲಿದೆಯಂತೆ. ಪ್ರಾಥಮಿಕವಾಗಿ ಅವರನ್ನು ಪ್ರಶ್ನಿಸುವ ಕಾರ್ಯ ಪೂರ್ಣಗೊಂಡಿದೆ. ಅವರು ಭಾರತಕ್ಕೆ ಬಂದ ನಂತರ 48 ಗಂಟೆ ಅವಧಿಯಲ್ಲಿ ಇದಿಷ್ಟು ವಿಚಾರಗಳು ಬಹಿರಂಗಗೊಂಡಿವೆ.

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಬಾಲಕೋಟ್​ ಪ್ರದೇಶದಲ್ಲಿರುವ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಘಟನೆ ನಂತರ ಪಾಕಿಸ್ತಾನದ ಜೆಟ್​ ಎಫ್​-16 ಯುದ್ಧ ವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್​-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್​-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್​ ಮೂಲಕ ಕೆಳಗಿಳಿದ ಅಭಿನಂದನ್​ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು. ಅಭಿನಂದನ್​ ಅವರ ಬಂಧನದ ನಂತರ ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.

Comments are closed.