ರಾಷ್ಟ್ರೀಯ

ಅಮೆರಿಕಾದ ಅಲಬಾಮಾದಲ್ಲಿ ಭಾರೀ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಕನಿಷ್ಠ 22 ಮಂದಿ ಸಾವು

Pinterest LinkedIn Tumblr

ಬೆರೆಗಾರ್ಡ್:ಅಮೆರಿಕಾದ ಆಗ್ನೇಯ ಭಾಗದ ಅಲಬಾಮಾ ರಾಜ್ಯದಲ್ಲಿ ಭಾರೀ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಕನಿಷ್ಠ 22 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಕೂಡ ಹಾನಿಗೀಡಾಗಿದೆ ಎಂದು ಅಸೋಸಿಯೆಟ್ ಪ್ರೆಸ್ ವರದಿ ಮಾಡಿದೆ.

ಸದ್ಯ 22 ಮಂದಿ ಮೃತಪಟ್ಟ ಬಗ್ಗೆ ದೃಢವಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಲೀ ಕೌಂಟಿಯ ಶೆರಿಫ್ ಜೆ ಜೋನ್ಸ್ ತಿಳಿಸಿದ್ದಾರೆ.

ಸುಂಟರಗಾಳಿಯಲ್ಲಿ ತೀವ್ರ ಹಾನಿಗೀಡಾದ ಪ್ರದೇಶಗಳ ಮೇಲೆ ಡ್ರೋನ್ ಹಾರಾಟ ನಡೆಸಿ ಪರಿಶೀಲಿಸುತ್ತಿದೆ. ಆದರೆ ಅಲ್ಲಿ ಇನ್ನೂ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎನ್ನಲಾಗಿದೆ.

ಇಂದು ಬೆಳಗ್ಗೆಯಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಬೆರೆಗಾರ್ಡ್ ಸುತ್ತಮುತ್ತ ಕಾಣಿಸಿಕೊಂಡ ಸುಂಟರಗಾಳಿ ಅರ್ಧ ಮೈಲಿನವರೆಗೆ ಆಸ್ತಿಪಾಸ್ತಿ ಹಾನಿ ಮತ್ತು ನಷ್ಟ ಕಂಡುಬಂದಿದೆ.

ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆ ನಂತರ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸುಂಟರಗಾಳಿ ಕ್ರಮೇಣ ತನ್ನ ವೇಗವನ್ನು ಗಣನೀಯವಾಗಿ ಹೆಚ್ಚಳ ಮಾಡಿಕೊಂಡಿತು. ಒಂದರ ಹಿಂದೊಂದರಂತೆ ಸರಣಿ ಸುಂಟರಗಾಳಿ ಸಷ್ಟಿಯಾಗಿದ್ದು, ಸುಂಟರಗಾಳಿಗೆ ಸಿಕ್ಕ ಎಲ್ಲ ವಸ್ತುಗಳನ್ನು ವೇಗವಾದ ಗಾಳಿ ಹೊತ್ತೊಯ್ದಿದೆ. ಸಾಕಷ್ಟು ಮನೆಗಳು, ಕಟ್ಟಡಗಳು ಹಾನಿಗೊಳಗಾಗಿದ್ದು, ಸಾವಿರಾರು ಜನರು ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ. ಹಾನಿಗೀಡಾದ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.

Comments are closed.