ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಸೇನಾಪಡೆಗಳು ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಸಾವಿಗೀಡಾದ ಉಗ್ರ ಸಂಖ್ಯೆ 2ಕ್ಕೇರಿದೆ.
ಕಳೆದ ಶುಕ್ರವಾರ ರಾತ್ರಿಯಿಂದ ಆರಂಭವಾಗಿದ್ದ ಗುಂಡಿನ ಕಾಳಗ ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ರಾತ್ರಿ ಓರ್ವ ಉಗ್ರಗಾಮಿಯನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿತ್ತು. ಹಂದ್ವಾರದ ಬಾಬಾಗುಂಡ್ ಗ್ರಾಮದಲ್ಲಿನ ಮೂರು ಮನೆಗಳಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಕಾಶ್ಮೀರ ಪೊಲೀಸರು ಹಾಗೂ ಸಿಆರ್ ಪಿಎಫ್ ಯೋಧರು ಮನೆಗಳನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಕೂಡ ಪ್ರತಿದಾಳಿ ನಡೆಸಿದ್ದು, ಕಳೆದ 60 ಗಂಟೆಗಳಲ್ಲಿ ಉಗ್ರರ ಗುಂಡಿಗೆ ಇಬ್ಬರು ಸಿಆರ್ ಪಿಎಫ್ ಯೋಧರು, ಇಬ್ಬರು ಕಾಶ್ಮೀರ ಪೊಲೀಸರು ಸೇರಿದಂತೆ ಒಟ್ಟು 5 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಓರ್ವ ನಾಗರಿಕನಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ. ಇನ್ನು ಉಗ್ರರು ಅಡಗಿದ್ದ ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಮನೆಗಳು ಭಾಗಶಃ ಹಾನಿಯಾಗಿದೆ. ಅಲ್ಲದೆ ಮನೆ ಧ್ವಂಸವಾಗಿದ್ದು ಉಗ್ರನ ಶವ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಘಟನಾ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭವಾಗಿದೆ.
Comments are closed.