ರಾಷ್ಟ್ರೀಯ

ವಾಘಾ ಗಡಿಯಲ್ಲಿ ಅಭಿನಂದನ್​ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರನ್ನು ಶುಕ್ರವಾರ ಮಧ್ಯಾಹ್ನ ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ತಾರಕಕ್ಕೆ ಮುಟ್ಟುವುದು ನಿವಾರಣೆಯಾದಂತೆ ಆಗಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಶಾಂತಿಯ ಧ್ಯೋತಕವಾಗಿ ವಿಂಗ್ ಕಮಾಂಡ್‍ ಅಭಿನಂದನ್‍ ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ನಿನ್ನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‍ ಖಾನ್‍ ಸಂಸತ್‍ನಲ್ಲಿ ಘೋಷಣೆ ಮಾಡುತ್ತಿದ್ದಂತೆ ಅಲ್ಲಿನ ಸದಸ್ಯರು ಮೇಜು ಕಟ್ಟು ಈ ನಿರ್ಧಾರವನ್ನು ಸ್ವಾಗತ ಮಾಡಿದ್ದರು.

ವಾಘಾ ಗಡಿಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ವಾಯುಪಡೆ ಮತ್ತು ಇತರ ಅಧಿಕಾರಿಗಳು, ಪೈಲಟ್‍ ಅಭಿನಂದನ್ ಅವರನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಗಡಿ ಹಾಗೂ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಇಂದು ಬೆಳಗ್ಗೆ ವಾಘಾ ಗಡಿಗೆ ಆಗಮಿಸಿದ ಭಾರತೀಯ ವಾಯು ಪಡೆಯ ನಿಯೋಗವೊಂದು ಸುದ್ದಿಗಾರರೊಂದಿಗೆ ಮಾತನಾಡಿ, ಅವರನ್ನು ನಾವು ಮರಳಿ ನೋಡಲು ಬಯಸುತ್ತೇವೆ ಎಂದು ಹೇಳಿದರು. ಈ ಮೂಲಕ ಪಾಕಿಸ್ತಾನದ ವಶದಲ್ಲಿರುವ ಪೈಲಟ್‍ ವಿಂಗ್ ಕಮಾಂಡರ್ ಅಭಿನಂದನ್‍ ಅವರನ್ನು ಬಿಡುಗಡೆಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದ್ದನ್ನು ಭಾರತೀಯ ವಾಯು ಪಡೆ ಸ್ವಾಗತಿಸಿದೆ.

ಈ ಮಧ್ಯೆ, ಅಭಿನಂದನ್‍ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬರಬೇಕು ಎಂದು ಮಾಜಿ ಸೇನಾಧಿಕಾರಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್‍ ಅಮರಿಂದರ್ ಸಿಂಗ್‍ ಅವರು ಮನವಿ ಮಾಡಿದ್ದಾರೆ. ಅಭಿನಂದನ್‍ ಅವರ ತಂದೆ ಕೂಡ ಪೈಲಟ್‍ ಆಗಿದ್ದವರು. ಅವರು ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಹಳೆ ವಿದ್ಯಾರ್ಥಿಯಾಗಿದ್ದರು. ಈ ವೇಳೆ ಅಮರಿಂದರ್ ಕೂಡ ಅಲ್ಲಿನ ವಿದ್ಯಾರ್ಥಿಯಾಗಿದ್ದರು.

ಆತ್ಮೀಯ ನರೇಂದ್ರ ಮೋದಿಜಿ ಅವರೇ, ನಾನು ಪಂಜಾಬ್‍ನ ಗಡಿ ಭಾಗಕ್ಕೆ ಹೋಗುತ್ತಿದ್ದೇನೆ. ಪ್ರಸ್ತುತ ನಾನು ಅಮೃತಸರದಲ್ಲಿದ್ದೇನೆ. ವಾಘಾ ಗಡಿಯ ಮೂಲಕ ಅಭಿನಂದನ್‍ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲಿದೆ ಎಂದು ತಿಳಿಯಲ್ಪಟ್ಟೆ. ಅವರನ್ನು ಬರಮಾಡಿಕೊಳ್ಳುವುದು ಬಹಳ ಗೌರವಯುತ ಕೆಲಸವಾಗಿದೆ. ಅವರ ತಂದೆ ಮತ್ತು ನಾನು ರಕ್ಷಣಾ ಅಕಾಡಮಿಯ ಹಳೆಯ ವಿದ್ಯಾರ್ಥಿಗಳಾಗಿದ್ದೇವೆ ಎಂದು ಕಾಂಗ್ರೆಸ್‍ ನಾಯಕ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಜಿನೆವಾ ಒಪ್ಪಂದದ ಅನುಸಾರವಾಗಿ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್‍ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ ಎಂದು ಗುರುವಾರ ವಾಯುಪಡೆಯ ಹಿರಿಯ ಅಧಿಕಾರಿ ಏರ್ ವೈಸ್ ಮಾರ್ಷಲ್‍ ಆರ್ ಜಿಕೆ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದರು.

Comments are closed.