ರಾಷ್ಟ್ರೀಯ

ಜಿನೀವಾ ಒಪ್ಪಂದದ ಪ್ರಕಾರ ಪಾಕ್​ ವಶದಲ್ಲಿರುವ ಭಾರತದ ಪೈಲಟ್​ ಅಭಿನಂದನ್​ನನ್ನು ಹೇಗೆ ನಡೆಸಿಕೊಳ್ಳಬೇಕು?

Pinterest LinkedIn Tumblr


ನೆನ್ನೆ ಪಾಕಿಸ್ತಾನದ ಜೆಟ್​ ವಿಮಾನವನ್ನು ಹಿಂಬಾಲಿಸುವಾಗ ಭಾರತ ವಾಯುಸೇನೆಯ ಮಿಗ್​- 21 ಯುದ್ಧವಿಮಾನ ಪತನಗೊಂಡಿದೆ. ಮಿಗ್ ವಿಮಾನದ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್ ವರ್ಥಮಾನ್​ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿರುವುದನ್ನು ಭಾರತ ಸರ್ಕಾರ ಒಪ್ಪಿಕೊಂಡಿದೆ. ಮತ್ತು ಅಭಿನಂದನ್​ ಅವರನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್​ ಕಳುಹಿಸುವಂತೆ ಪಾಕಿಸ್ತಾನಕ್ಕೆ ಹೇಳಿದೆ.

ಭಾರತ ವಾಯುಪಡೆಯ ಪೈಲಟ್​ ಅಭಿನಂದನ್​ ಅವರನ್ನು ಪಾಕಿಸ್ತಾನ ಸೆರೆಯಲ್ಲಿರುವ ನಂತರ ಇದು ಜಿನೇವಾ ಒಪ್ಪಂದದ ಉಲ್ಲಂಘನೆ ಎಂಬ ವ್ಯಾಪಕ ಕೂಗು ಎಲ್ಲೆಡೆಯಿಂದ ಕೇಳಿಬರುತ್ತದೆ. ಹಾಗಾದರೆ, ಈ ಜಿನೇವಾ ಒಪ್ಪಂದ ಅಂದರೇನು? ಅದರ ನಿಯಮಗಳೇನು? ಈ ಒಪ್ಪಂದದ ಪ್ರಕಾರ ಸೆರೆ ಸಿಕ್ಕ ಶತ್ರು ರಾಷ್ಟ್ರದ ಸೈನಿಕನನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ದೇಶ-ದೇಶಗಳ ನಡುವೆ ಯುದ್ಧ ಸಂಭವಿಸಿದಾಗ ಸೆರೆ ಸಿಕ್ಕ ಯುದ್ಧ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ಜಿನೇವಾ ಒಪ್ಪಂದ ಕೆಲವು ಮಾನದಂಡಗಳನ್ನು ವಿಧಿಸಿದೆ. ಅದರಂತೆ ಎಲ್ಲ ದೇಶಗಳು ನಡೆದುಕೊಳ್ಳಬೇಕು. ಒಂದು ಇದನ್ನು ಉಲ್ಲಂಘಿಸಿದ್ದೆ ಆದಲ್ಲಿ, ಅದು ಜಿನೇವಾ ಒಪ್ಪಂದದ ಉಲ್ಲಂಘನೆಯಾಗುತ್ತದೆ.

ಜಿನೇವಾ ಒಪ್ಪಂದ ದೇಶಗಳ ನಾಗರಿಕರ, ರಾಜತಾಂತ್ರಿಕ ಹಾಗೂ ಮಾನವ ಹಕ್ಕುಗಳ ವಿಷಯದಲ್ಲಿ ಬಹುದೊಡ್ಡ ಅಸ್ತ್ರವಿದ್ದಂತೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭೋದ್​ ಕುಮಾರ್​ ಅವರು ಹೇಳುವಂತೆ, ಜಿನೇವಾ ಒಪ್ಪಂದದ ಪ್ರಕಾರ ಯಾವುದೇ ದೇಶ ಶತ್ರು ರಾಷ್ಟ್ರದ ಸೈನಿಕರನ್ನು ಯುದ್ಧ ಕೈದಿಯಾಗಿ ಬಂಧಿಸಿದ್ದೇ ಆದಲ್ಲಿ ಅವರನ್ನು ಮತ್ತೆ ಅವರ ದೇಶಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಬೇಕು.

ಜಿನೇವಾ ಒಪ್ಪಂದದ ಅಡಿಯಲ್ಲಿ ಯುದ್ಧ ಕೈದಿಗಳಿಗೆ ಹಕ್ಕುಗಳನ್ನು ಒದಗಿಸಿದೆ ಎಂದು ಪ್ರೊ.ಸುಭೋದ್ ಹೇಳುತ್ತಾರೆ. ಯುದ್ಧದ ವೇಳೆ ಕೈದಿಗಳಿಗೆ ರಕ್ಷಣೆ ಒದಗಿಸುವುದು ಇದರ ಮುಖ್ಯ ಉದ್ದೇಶ. ಒಂದು ವೇಳೆ ಯುದ್ಧ ಕೈದಿ ಗಾಯಗೊಂಡಿದ್ದೆ ಆದಲ್ಲಿ ಅವರನ್ನು ಆರೈಕೆ ಮಾಡಬೇಕು. ಚಿಕಿತ್ಸೆ ನೀಡದಿದ್ದಲ್ಲಿ ಅದು ಅಮಾನವೀಯ ನಡೆಯಾಗುತ್ತದೆ. ಯುದ್ಧ ಕೈದಿಗೆ ಸರಿಯಾಗಿ ಆಹಾರ ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಜಿನೇವಾ ಒಪ್ಪಂದದ ಪ್ರಕಾರ ಒದಗಿಸಬೇಕು ಎಂದು ಸುಭೋದ್​ ತಿಳಿಸುತ್ತಾರೆ.

ಯುದ್ಧ ಕೈದಿಯನ್ನು ಥಳಿಸುವುದಾಗಲಿ, ಬೆದರಿಸುವುದಾಗಲಿ ಅಥವಾ ಅವರೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಈ ಒಪ್ಪಂದದಲ್ಲಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಯುದ್ಧ ಕೈದಿಯ ಜಾತಿ, ಧರ್ಮವನ್ನು ಹೇಳುವಂತೆ ಒತ್ತಡ ಹೇರಬಾರದು. ಯುದ್ಧ ಕೈದಿಗಳು ಕೇವಲ ತಮ್ಮ ಹೆಸರು, ಸೇನೆಯಲ್ಲಿ ತಮ್ಮ ಸ್ಥಾನ ಮತ್ತು ತಮ್ಮ ಯೂನಿಟ್​ ಹೆಸರನ್ನು ಮಾತ್ರವೇ ಹೇಳಬೇಕು ಎಂದು ಜಿನೇವಾ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಮೊದಲ ಜಿನೇವಾ ಒಪ್ಪಂದ ನಡೆದಿದ್ದು 1864ರಲ್ಲಿ. ಎರಡನೇ ಒಪ್ಪಂದ 1906 ಮತ್ತು ಮೂರನೇ ಜಿನೇವಾ ಒಪ್ಪಂದ 1929ರಲ್ಲಿ ಏರ್ಪಟ್ಟಿತ್ತು. ಎರಡನೇ ವಿಶ್ವ ಯುದ್ಧದ ನಂತರ 1949ರಲ್ಲಿ ಜಾಗತಿಕವಾಗಿ ನಾಲ್ಕನೇ ಬಾರಿಗೆ ಜಿನೇವಾ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಹೇಳಿ 194 ದೇಶಗಳು ಸಹಿ ಮಾಡಿವೆ.

Comments are closed.