ರಾಷ್ಟ್ರೀಯ

ಗಡಿಯಲ್ಲಿ ಯುದ್ಧ ವಾತಾವರಣ: ಕಾರ್ಯಕ್ರಮದಿಂದ ಅರ್ಧದಲ್ಲೇ ನಿರ್ಗಮಿಸಿ ತುರ್ತು ಸಭೆಗೆ ಧಾವಿಸಿದ ಮೋದಿ!

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಹಲವು ಬೆಳವಣಿಗೆಗಳು ನಡೆದಿದ್ದು, ಗಡಿಯಲ್ಲಿ ಯುದ್ಧದ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವೈಮಾನಿಕ ದಾಳಿಯಾದ ಮರುದಿನವೇ ಭಾರತದ ವಾಯುಗಡಿ ಉಲ್ಲಂಘಿಸಿದ್ದ ಪಾಕಿಸ್ತಾನ ಭಾರತದ ಸೇನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸಿದೆ. ಅಷ್ಟೇ ಅಲ್ಲದೇ 2016 ರ ಹಳೆಯ ವಿಡಿಯೋವೊಂದನ್ನು ಬಳಸಿ ತಾನು ಈಗ ಭಾರತದ ಮಿಗ್-21 ವಿಮಾನವನ್ನು ಹೊಡೆದುರುಳಿಸಿರುವುದಾಗಿ ಸುಳ್ಳು ಹೇಳಿದೆ.

ಪಾಕಿಸ್ತಾನ ಭಾರತೀಯ ವಾಯುಗಡಿ ದಾಟಿ ವೈಮಾನಿಕ ದಾಳಿ ನಡೆಸಿರುವ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಾವು ಭಾಗವಹಿಸಿದ್ದ ಕಾರ್ಯಕ್ರಮದಿಂದ ಅರ್ಧದಲ್ಲೇ ನಿರ್ಗಮಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಉನ್ನತಮಟ್ಟದ ತುರ್ತು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಪಾಕಿಸ್ತಾನದ ಕೃತ್ಯದ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದು, ಎಫ್-16 ನ್ನು ಹೊಡೆದುರುಳಿಸಿರುವ ಭಾರತೀಯ ಸೇನಾಪಡೆಗಳನ್ನು ಅಭಿನಂದಿಸಿದ್ದಾರೆ.

ಇದೇ ವೇಳೆ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣಗಳು, ಪಠಾಣ್ ಕೋಟ್ ನ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ರಜೆಯಲ್ಲಿರುವ ಯೋಧರಿಗೆ ಕೂಡಲೇ ಮರಳಿ ಬರುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇನ್ನು ಯಾವುದೇ ಕ್ಷಣದಲ್ಲಿ ಟೇಕ್ ಆಫ್ ಆಗಲು ಸಿದ್ಧವಾಗಿರುವಂತೆ ವಾಯುಪಡೆಗೆ ಸೂಚನೆ ನೀಡಲಾಗಿದ್ದು, ಯಲಹಂಕಾ ವಾಯುನೆಲೆಯಿಂದ ಯುದ್ಧವಿಮಾನಗಳನ್ನು ಗಡಿ ಭಾಗಕ್ಕೆ ರವಾನೆ ಮಾಡಲು ಸೂಚನೆ ನೀಡಲಾಗಿದೆ.

ಇನ್ನು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲು ಗೃಹ ಸಚಿವ ರಾಜನಾಥ್ ಸಿಂಗ್ ಸಿಆರ್ ಪಿಎಫ್ ಗೆ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಔಷಧಗಳ ಸಂಗ್ರಹಣೆಗೆ ಸೂಚನೆ ನೀಡಲಾಗಿದೆ.
ಪಾಕಿಸ್ತಾನ ಭಾರತೀಯ ವಾಯುಗಡಿಯನ್ನು ಉಲ್ಲಂಘನೆ ಮಾಡಿ, ಸೇನೆಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಯತ್ನಿಸಿರುವ ಬೆನ್ನಲ್ಲೇ ಪ್ರಧಾನಿ ಮೋದಿ ನಿವಾಸದಲ್ಲಿ ತುರ್ತು ಸಭೆ ನಡೆಯುತ್ತಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

Comments are closed.