ರಾಷ್ಟ್ರೀಯ

ಅಮೆರಿಕಕ್ಕೂ ಅಭೇಧ್ಯವಾಗಿದ್ದ ಬಾಲಾಕೋಟ್ ಉಗ್ರ ಶಿಬಿರ ಹೇಗಿತ್ತು ಗೊತ್ತಾ?

Pinterest LinkedIn Tumblr


ನವದೆಹಲಿ: ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿನ ಬಾಲಾಕೋಟ್ ನಲ್ಲಿರುವ ಜೈಶ್ ಇ ಉಗ್ರರ ಬೃಹತ್ ತರಬೇತಿ ಕೇಂದ್ರವನ್ನು ಧ್ವಂಸ ಮಾಡಿದ ಬೆನ್ನಲ್ಲೇ ಈ ತರಬೇತಿ ಕೇಂದ್ರ ರೋಚಕ ಮಾಹಿತಿ ಲಭ್ಯವಾಗುತ್ತಿದೆ.
ಹೌದು.. ದಶಕಗಳಿಂದಲೂ ಸಾವಿರಾರು ಉಗ್ರರಿಗೆ ಕಾರಸ್ಥಾನವಾಗಿದ್ದ ಬಾಲಾಕೋಟ್ ಉಗ್ರ ಕ್ಯಾಂಪ್ ಇದೀಗ ನಾಮಾವಶೇಷವಾಗಿದ್ದು, ಇದೇ ಉಗ್ರ ಕ್ಯಾಂಪ್ ನಲ್ಲಿ ಇಡೀ ವಿಶ್ವಕ್ಕೇ ಕಂಟಕವಾಗಿದ್ದ ನೂರಾರು ಉಗ್ರಗಾಮಿಗಳು ತರಬೇತಿ ಪಡೆದಿದ್ದರು. ಇಂತಹ ಕುಖ್ಯಾತ ಉಗ್ರ ಕ್ಯಾಂಪ್ ನ ಮಾಹಿತಿ ಇದೀಗ ಲಭ್ಯವಾಗಿದ್ದು, ಸ್ವತಃ ವಿಶ್ವಸಂಸ್ಥೆಯೇ ಕಲೆಹಾಕಿರುವ ದಾಖಲೆಯ(ಡಾಸಿಯರ್​) ಪುಟಗಳನ್ನು ತಿರುವಿ ಹಾಕಿದಾಗ ಭಾರತದ ವಾಯುಪಡೆ ಸರ್ಜಿಕಲ್​ ಸ್ಟ್ರೈಕ್​​ನಲ್ಲಿ ಏನನ್ನೆಲ್ಲಾ ನಾಶಪಡಿಸಿದೆ ಎಂಬುದು ಮನದಟ್ಟಾಗುತ್ತದೆ. ಅಂದಹಾಗೆ ವಿಶ್ವಸಂಸ್ಥೆಯ ಈ ಡಾಸಿಯರ್​​ಗೆ ಚೀನಾ ಕೂಡ ಸಹ ಸಹಿ ಹಾಕಿದೆ.
ಉಗ್ರರ ಸ್ವರ್ಗವಾಗಿದ್ದ ಬಾಲಾಕೋಟ್ ಕ್ಯಾಂಪ್
ಬಾಲಾಕೋಟ್ ಉಗ್ರ ಕ್ಯಾಂಪ್ ಅಕ್ಷರಶಃ ಉಗ್ರರಿಗೆ ಸ್ವರ್ಗವಾಗಿತ್ತು. ಒಂದು ದೇಶದ ಸೇನೆ ತನ್ನ ಯೋಧರಿಗೆ ತರಬೇತಿ ನೀಡಲು ಬೇಕಿದ್ದ ಎಲ್ಲ ವ್ಯವಸ್ಥೆಗಳೂ ಬಾಲಾಕೋಟ್ ಉಗ್ರ ಕ್ಯಾಂಪ್ ನಲ್ಲಿತ್ತು ಎಂದರೆ ನೀವೇ ಊಹಿಸಿ.. ಇಲ್ಲಿ ಆತ್ಮಾಹುತಿ ದಾಳಿಕೋರರು ತಮಗಾಗಿ ನಿರ್ಮಿಸಿಕೊಂಡಿದ್ದ ಸ್ವಿಮ್ಮಿಂಗ್​ ಪೂಲ್​​ನಿಂದ ಹಿಡಿದು ಏನೆಲ್ಲ ವ್ಯವಸ್ಥೆಗಳನ್ನು ಹೊಂದಿದ್ದರು ಎಂಬುದು ವಿಶ್ವಸಂಸ್ಥೆಯ ಡಾಸಿಯರ್ ನಲ್ಲಿದೆ.
ಈ ಡಾಸಿಯರ್ ನಲ್ಲಿನ ಮಾಹಿತಿಗಳ ಅನ್ವಯ ಇಲ್ಲಿ ಏಕಕಾಲಕ್ಕೆ ಬರೊಬ್ಬರಿ 250 ಉಗ್ರರು ತರಬೇತಿ ಪಡೆಯುತ್ತಿದ್ದರಂತೆ. 2000ನೇ ಇಸವಿಯಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್​​ ನಿಂದ ಸ್ಥಾಪಿತವಾದ ಮತ್ತು ಅವನ ಸೋದರ ಮಫ್ತಿ ಅಬ್ದುಲ್​ ರೌಫ್ ಅಗ್ಸರ್ ನ ನಾಯಕತ್ವದಲ್ಲಿ 250 ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಅಬ್ದುಲ್​ ರೌಫ್ ಅಗ್ಸರ್ ಕಶ್ಮೀರಿ, ಕಾಶ್ಮೀರದಲ್ಲಿನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದ. ಇನ್ನು, ಮಸೂದ್ ಅಜರ್ ನ ಮತ್ತೊಬ್ಬ ಸೋದರ ಇಬ್ರಾಹಿಂ ಅಜರ್ ಸಹ ಈ ರಕ್ತಪಿಪಾಸು ಸಂಘಟನೆಯ ಪ್ರಮುಖ ಸದಸ್ಯ. ಇವನು ಭಾರತದ ವಿಮಾನವನ್ನು (ಐಸಿ-814) ಹೈಜಾಕ್​ ಮಾಡಿದ್ದವ ಕೂಡ. ​​​
ಮಸೂದ್ ಅಜರ್​​ನ ಸೋದರಳಿಯ ಮೌಲಾನಾ ಯೂಸುಫ್​​ ಅಜರ್ ತರಬೇತಿ ಕೇಂದ್ರದ ನೇತೃತ್ವ ವಹಿಸಿದ್ದು, ಭಾರತ ಮತ್ತು ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸಲು ಉಗ್ರರಿಗೆ ತರಬೇತಿ ನೀಡುತ್ತಾನೆ.
ಬಾಲಾಕೋಟ್ ಜೈಶ್ ಉಗ್ರ ಸಂಘಟನೆಯ ಹೆಡ್ ಕ್ವಾರ್ಟರ್ಸ್ ಇದ್ದಂತೆ
ಮಸೂದ್ ಅಜರ್​​ ಮತ್ತು ಅವನ ಪಾಪಿ ಸಂತಾನಗಳು ನೆಲೆಸಿರುವ ನಿವಾಸವು ಬಹವಾಲಪುರದಲ್ಲಿರುವ ರೈಲ್ವೇ ಲಿಂಕ್​ ರಸ್ತೆಯಲ್ಲಿದೆ. ಈ ನಿವಾಸವು 3 ಎಕರೆ ಜಾಗದಲ್ಲಿದೆ. JeM ಸಂಘಟನೆಯ ಎಲ್ಲಾ ಸಭೆಗಳು ಇಲ್ಲೇ ನಡೆಯುವುದು. ಪ್ರತಿ ಶುಕ್ರವಾರ ಅಲ್ಲಾ ಹೆಸರು ಹೇಳಿಕೊಂಡು ಆತ್ಮಾಹುತಿ ಪಡೆಗಳಲ್ಲಿರುವ ಯುವ ಮನಸ್ಸುಗಳಲ್ಲಿ ಕ್ಷಾತ್ರ ಭಾವನೆ ತುಂಬಿ ಅವರನ್ನು ರಕ್ತಪೀಪಾಸುಗಳನ್ನಾಗಿ ತಯಾರಿ ಮಾಡುವುದು ಇಲ್ಲಿಯೇ ಮತ್ತು ಅದರ ನಾಯಕ ಅಬ್ದುಲ್​ ರೌಫ್ ಅಗ್ಸರ್ ಮತ್ತು ಇನ್ನೊಂದು ಹಿರಿಯ ತಲೆ. ಸೇನಾ ತರಬೇತಿವರೆಗಿನ ಕಠಿಣ ತಾಲೀಮುಗಳನ್ನು ಹೇಳಿಕೊಡುವುದು ಇಲ್ಲೇ. ಇದಕ್ಕೆ ‘ಮುಜಾಹಿದ್ದೀನ್’ ಎಂದು ಕರೆಯಲಾಗುತ್ತದೆ. ಮನ್ಸೇಹರಾ ಜಿಲ್ಲೆಯ ಬಾಲಾಕೋಟ್​​ ನಗರದ ಬಳಿಯಿರುವ ಅರಣ್ಯ ಮತ್ತು ಬೆಟ್ಟಗುಡ್ಡಗಳ ಜಾಗವೇ ಉಗ್ರರ ಆ ಅಡಗುದಾಣ. ಇದನ್ನೇ ಇಂದು ಬೆಳಗಿನ ಜಾವ ಭಾರತೀಯ ವಾಯುಪಡೆ ನುಚ್ಚುನೂರು ಮಾಡಿರುವುದು!
ಮಸ್ಲಿಮೇತರರ ವಿರುದ್ಧ ಜಿಹಾದ್​ ನಡೆಸಲು ಯುವಕರನ್ನು ಸಜ್ಜುಗೊಳಿಸುವುದಕ್ಕಾಗಿಯೇ ಇಲ್ಲಿ 2015ರಲ್ಲಿ ಮಾರ್ಕಜ್​ ಸುಭಾನಲ್ಲಾ ಎಂದು ಅತ್ಯಾಧುನಿಕ ವಸತಿ ಸಂಕೀರ್ಣವನ್ನು ನಿರ್ಮಿಸಲಾಯ್ತು. ಅರಣ್ಯ ಪ್ರದೇಶದ 6 ಎಕರೆಯಲ್ಲಿ ಈ ಜಾಗ ಇದೆ. ಸುಮಾರು 600ಕ್ಕೂ ಹೆಚ್ಚು ಮಂದಿ ವಾಸ ಮಾಡಬಹುದಾಗಿದೆ. ಈ ಜಾಗದಲ್ಲಿ ಗುಂಡಿನ ದಾಳಿ ಅಭ್ಯಾಸ, ಸ್ವಿಮ್ಮಿಂಗ್​ ಪೂಲ್​ ಮತ್ತು ಜಿಮ್ನಾಶಿಯಂ ತರಬೇತಿ ಕೇಂದ್ರಗಳೂ ಇವೆ. ಈ ಅತ್ಯಾಧುನಿಕ ವಸತಿ ಸಂಕೀರ್ಣದಲ್ಲಿ ಭಯೋತ್ಪಾದಕ ಸಂಘಟನೆಗಳ ಧ್ವಜಗಳು ಮತ್ತು ಬ್ಯಾನರ್ ಗಳನ್ನು ಹಾಕಲಾಗಿದೆ. ಭಾರೀ ಪ್ರಮಾಣದ ಮದ್ದು ಗುಂಡುಗಳು, ಶಸ್ತ್ರಾಸ್ತ್ರಗಳ ಗೋದಾಮು ಸಹ ಇಲ್ಲಿದೆ.
2018ರ ಏಪ್ರಿಲ್​ 1 ರಂದು ಇಲ್ಲಿ ತರಬೇತಿ ಪಡೆಯುವ ಪಾಪಿ ಉಗ್ರರಿಗೆ ಘಟಿಕೋತ್ಸವವನ್ನು ಕೂಡ ಮಾಡಲಾಗಿತ್ತು. ಅಂದು ನಡೆದ ಕಾರ್ಯಕ್ರಮದಲ್ಲಿ ಇದೇ ಮಸೂದ್ ಅಜರ್ ಮತ್ತು ಅಬ್ದುಲ್​ ರೌಫ್ ಅಗ್ಸರ್ ಕಶ್ಮೀರಿ ಮುಖ್ಯ ಅತಿಥಿಗಳಾಗಿದ್ದರು ಎನ್ನುತ್ತದೆ ವಿಶ್ವಸಂಸ್ಥೆಯ ಡಾಸಿಯರ್.
ಮೆಟ್ಟಿಲುಗಳ ಮೇಲೆ ರಾಷ್ಟ್ರಧ್ವಜಗಳು
ಅಮಾಯಕ ಯುವಕರಿಗೆ ಇವರು ಎಂತಹ ಭಾವನೆಗಳನ್ನು ತುಂಬುತ್ತಿದ್ದರು ಎಂಬುದಕ್ಕೆ ಇಲ್ಲಿ ಸ್ಪಷ್ಟ ಉದಾಹರಣೆ ಇದ್ದು, ಈ ಉಗ್ರ ಕ್ಯಾಂಪ್ ನಲ್ಲಿನ ಮೆಟ್ಟಿಲುಗಳಿಗೆ ಅಮೆರಿಕ, ಭಾರತ, ಇಸ್ರೇಲ್ ಸೇರಿದಂತೆ ವಿಶ್ವದ ಮುಸ್ಲಿಮೇತರ ರಾಷಶ್ಟ್ರದಳ ಧ್ವಜಗಳ ಬಣ್ಣ ಬಳಿಸಿ ಅದರ ಮೇಲೆಯೇ ಯುವಕರು ನಡೆದಾಡುವಂತೆ ಮಾಡಿದ್ದರು. ಅಮೆರಿಕಾ, ಬ್ರಿಟನ್​ ಮತ್ತು ಇಸ್ರೇಲ್​​ ರಾಷ್ಟ್ರಗಳ ರಾಷ್ಟ್ರಧ್ವಜಗಳನ್ನು ಮೆಟ್ಟಿಲುಗಳ ಮೇಲೆ ರಚಿಸಿ, ಅದನ್ನು ಸದಾ ತುಳಿದು ವಿಕಟ ನಗೆ ನಗುತ್ತಿದ್ದರು ಎಂಬುದೂ ಈಗ ಡಾಸಿಯರ್ ಮೂಲಕ ಬಯಲಾಗಿದೆ.
ಒಟ್ಟಾರೆ ಇದೀಗ ಜೈಶ್ ಉಗ್ರ ಸಂಘಟನೆಯ ಹೆಡ್ ಕ್ವಾರ್ಟರ್ಸ್ ಭಾರತೀಯ ಸೇನೆಯ ವಾಯುದಾಳಿಗೆ ಸಿಲುಕಿ ನಾಶವಾಗಿದ್ದು, ಪಾಕಿಸ್ತಾನ ಸರ್ಕಾರ ಇತ್ತ ಗಮನ ಹರಿಸಿ ಮತ್ತೆ ಈ ಉಗ್ರರ ರಾಜಧಾನಿ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ. ಅದರೆ ಇದು ಕನಸಿನ ಮಾತು ಎಂಬುದೂ ಕೂಡ ತಿಳಿದಿದೆ.

Comments are closed.