ರಾಷ್ಟ್ರೀಯ

ತೆಲುಗು ದೇಶಂ ಪಕ್ಷವನ್ನು ಮುಗಿಸಲು ಮೋದಿ, ಕೆಸಿಆರ್, ಜಗನ್ಮೋಹನ್​ರಿಂದ 1,000 ಕೋಟಿ ಡೀಲ್: ಚಂದ್ರ ಬಾಬು ನಾಯ್ಡು ಆರೋಪ

Pinterest LinkedIn Tumblr


ಅಮರಾವತಿ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಧ್ಯೆ ರಾಜಕೀಯ ವಾಗ್ಯುದ್ಧ ಮುಂದುವರಿದಿದೆ. ಆಂಧ್ರಪ್ರದೇಶದ ಅಭಿವೃದ್ಧಿಯಾಗದಂತೆ ತಡೆಯಲು ಹಾಗೂ ಟಿಡಿಪಿಯನ್ನು ಮುಗಿಸಲು ವಿರೋಧಿಗಳು ಪಿತೂರಿ ನಡೆಸುತ್ತಿದ್ದಾರೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಚಂದ್ರಶೇಖರ್ ರಾವ್ ಮತ್ತು ವೈಎಸ್ ಜಗನ್ಮೋಹನ್ ರೆಡ್ಡಿ ಇಬ್ಬರೂ ವಿವಿಧ ರೀತಿಯಲ್ಲಿ ಆಂಧ್ರದ ಅಭಿವೃದ್ಧಿಗೆ ತಡೆಗಾಲು ಹಾಕುತ್ತಿದ್ಧಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ಸಿಕ್ಕಿದೆ. ಈ ಮೂವರೂ ಸೇರಿ ಆಂಧ್ರದಲ್ಲಿ ಟಿಡಿಪಿಯನ್ನು ಸೋಲಿಸಲು 1 ಸಾವಿರ ಕೋಟಿ ರೂ ಡೀಲ್ ಮಾಡಿಕೊಂಡಿದ್ಧಾರೆ ಎಂದು ನಾಯ್ಡು ಗಂಭೀರ ಆಪಾದನೆ ಮಾಡಿದ್ದಾರೆ.

“ಕೆಸಿಆರ್ ಅವರು ಆಂಧ್ರದ ಮೇಲೆ ಅಧಿಕಾರ ಚಲಾಯಿಸಲು ಯತ್ನಿಸುತ್ತಿದ್ಧಾರೆ. ಅವರಿಗೆ ಆಂಧ್ರ ಮತ್ತು ಈ ರಾಜ್ಯದ ಜನರನ್ನು ಕಂಡರಾಗದು. ಅವರ ಮಗಳು ಕವಿತಾ ಅವರು ಪೊಲ್ಲಾವರಮ್ ಯೋಜನೆ ವಿರುದ್ಧ ಪ್ರಕರಣಗಳನ್ನ ದಾಖಲಿಸುತ್ತಿದ್ಧಾರೆ. ಅವರ ಮಗ ಕೆ.ಟಿ. ರಾಮರಾವ್ ಅವರು ಈ ಬಾರಿ ಆಂಧ್ರದಲ್ಲಿ ವೈಎಸ್ಸಾರ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಏನನ್ನು ಸೂಚಿಸುತ್ತದೆ?” ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.

ಆಂಧ್ರದ ಚುನಾವಣೆ ಖರ್ಚಿಗೆ ಕೆಸಿಆರ್ ಅವರು 1 ಸಾವಿರ ಕೋಟಿ ರೂ ಕೊಟ್ಟಿದ್ದಾರೆ. ಜಗನ್ಮೋಹನ್ ರೆಡ್ಡಿಯನ್ನ ಅಧಿಕಾರಕ್ಕೆ ತಂದು ಅವರನ್ನು ರಿಮೋಟ್ ಕಂಟ್ರೋಲ್​ನಂತೆ ಬಳಸಿಕೊಂಡು ಆಂಧ್ರದ ಅಧಿಕಾರ ನಡೆಸುವುದು ಕೆಸಿಆರ್ ಉದ್ದೇಶವಾಗಿದೆ. ಇದಕ್ಕೆ ಮೋದಿ ಬೆಂಬಲವಾಗಿ ನಿಂತಿದ್ದಾರೆ ಎಂದು ಟಿಡಿಪಿ ಮುಖ್ಯಸ್ಥ ಹೇಳಿದ್ದಾರೆ.

ತೆಲಂಗಾಣಕ್ಕೆ ಹೆಚ್ಚು ಆದಾಯ ಹರಿದುಬಂದರೂ ಆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ವಿಫಲರಾದ ಕೆಸಿಆರ್ ಅವರು ಆಂಧ್ರದ ಅಭಿವೃದ್ಧಿಗೂ ಅಡ್ಡಿಯಾಗುತ್ತಿದ್ದಾರೆ. ಹೈದರಾಬಾದ್​ನಲ್ಲಿರುವ ಆಂಧ್ರದ ಉದ್ಯಮಿಗಳ ಮೇಲೆ ಜಗನ್ಮೋಹನ್ ರೆಡ್ಡಿಯನ್ನು ಬೆಂಬಲಿಸುವಂತೆ ಕೆಸಿಆರ್ ಒತ್ತಡ ಹಾಕುತ್ತಿದ್ದಾರೆ. ತಾನು ಸಿಎಂ ಆಗಿರುವವರೆಗೂ ಈ ಚಿತಾವಣಿ ಕೆಲಸ ಮಾಡುವುದಿಲ್ಲ ಎಂದು ನಾಯ್ಡು ಹೇಳಿದ್ದಾರೆ.

ಯಾರು ಏನೇ ಪಿತೂರಿ ಮಾಡಲಿ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸುವುದು ಟಿಡಿಪಿ ಪಕ್ಷವೇ ಎಂದು ನಾಯ್ಡು ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು, ಆಂಧ್ರಕ್ಕೋಸ್ಕರ ಮೋದಿ ಏನೂ ಮಾಡಲಿಲ್ಲ. ಕೊಟ್ಟ ಭರವಸೆಯನ್ನು ಹಾಗೇ ಬಿಟ್ಟಿದ್ಧಅರೆ. ಅಲ್ಲದೇ, ಆಂಧ್ರದ ಹಕ್ಕಿಗಾಗಿ ಧ್ವನಿ ಎತ್ತುವವರ ಮೇಲೆ ಐಟಿ, ಸಿಬಿಐ, ಇಡಿ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ಸಹಿಸಿಕೊಳ್ಳುವುದಿಲ್ಲ ಎಂದೆನ್ನುತ್ತಿದ್ದವರು ಈಗ ಭ್ರಷ್ಟಾಚಾರ ಆರೋಪಿ ಜಗನ್ಮೋಹನ್ ರೆಡ್ಡಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ.

Comments are closed.