ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಕಾಶ್ಮೀರ ಮೂಲದ ಇಬ್ಬರು ಜೈಶ್ ಇ ಮೊಹಮದ್ ಉಗ್ರರ ಬಂಧನ

Pinterest LinkedIn Tumblr

ಲಖನೌ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ಉಗ್ರಗಾಮಿಗಳನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಉತ್ತರ ಪ್ರದೇಶದ ಖಂಕಾಹ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಖಾಸಗಿ ಹಾಸ್ಟೆಲ್ ನಲ್ಲಿ ತಂಗಿದ್ದ ಶಹನವಾಜ್ ಅಹ್ಮತ್ ತೆಲಿ ಹಾಗೂ ಅಕಿಬ್ ಎಂಬುವವರನ್ನು ಬಂಧಿಸಲಾಗಿದೆ. ಇಬ್ಬರೂ ಉಗ್ರರು ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಂಘಟನೆಯಲ್ಲಿ ಗ್ರೆನೇಡ್ ಎಕ್ಸ್ ಪರ್ಟ್ ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳು, ಇಬ್ಬರೂ ಕಾಶ್ನೀರ ಮೂಲದವರಾಗಿದ್ದು, ಶಹನವಾಜ್ ಕುಲ್ಗಾಮ್ ನಿವಾಸಿಯಾಗಿದ್ದು, ಅಕಿಬ್ ಪುಲ್ವಾಮ ನಿವಾಸಿಯಾಗಿದ್ದಾನೆ. ಇಬ್ಬರ ಬಂಧನದ ವೇಳೆ ಎರಡು ಬಂದೂಕು ಮತ್ತು ಜೀವಂತ ಗುಂಡುಗಳಿರುವ 2 ಕಾರ್ಟ್ರಿಡ್ಜ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರ ಸಂಘಟನೆಗಾಗಿ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಈ ಇಬ್ಬರೂ ಉತ್ತರ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ರಹಸ್ಯ ಪ್ರದೇಶದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಂತೆಯೇ ಇವರಿಗೆ ಹಣ ನೀಡುವವರು ಯಾರು, ಯಾರನ್ನು ಭೇಟಿ ಮಾಡಲು ಉಗ್ರರು ಅಗಮಿಸಿದ್ದರು ಎಂಬಿತ್ಯಾದಿ ಅಂಶಗಳ ಕುರಿತು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

Comments are closed.