ರಾಷ್ಟ್ರೀಯ

ಪುಲ್ವಾಮ ಉಗ್ರರ ದಾಳಿ ಪ್ರಕರಣ: ಕಾಶ್ಮೀರದಲ್ಲಿ ಎನ್ ಐಎಯಿಂದ 23 ಮಂದಿ ಶಂಕಿತರ ತೀವ್ರ ವಿಚಾರಣೆ

Pinterest LinkedIn Tumblr

ನವದೆಹಲಿ: ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಒಟ್ಟು 23 ಮಂದಿ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.

ಉಗ್ರ ದಾಳಿ ನಡೆಸಿದ ಜೈಶ್ ಇ ಮೊಹಮದ್ ಸಂಘಟನೆಯೊಂದಿಗೆ ನೇರ ಮತ್ತು ಪರೋಕ್ಷ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಎನ್ ಐಎ ಅಧಿಕಾರಿಗಳು ಕಾಶ್ಮೀರದಲ್ಲಿ ಒಟ್ಟು 23 ಮಂದಿ ಶಂಕಿತರನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರ ಪೊಲೀಸ್ ಅಧಿಕಾರಿಗಳು ಪ್ರಸ್ತುತ 23 ಮಂದಿಯನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಜೈಶ್ ಇ ಮೊಹಮದ್ ಸಂಘಟನೆಯ ಕುರಿತು ಸಹಾನುಭೂತಿ ಹೊಂದಿರುವವರೂ ಸೇರಿದ್ದಾರೆ ಎನ್ನಲಾಗಿದೆ. ಈ ಪೈಕಿ ವಶಕ್ಕೆ ಪಡೆದಿರುವ ಶಂಕಿತರ ಪೈಕಿ ಹಲವರು ಪುಲ್ವಾಮ ದಾಳಿ ಬಳಿಕ ಜೈಶ್ ಉಗ್ರ ಸಂಘಟನೆಯ ಪ್ರಮುಖರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.

ಅಂತೆಯೇ ಮಹಮದ್ ಉಮೇರ್ ಎಂಬ ಜೈಶ್ ಕಮಾಂಡರ್ ಕೂಡ ಪುಲ್ವಾಮ ಉಗ್ರ ದಾಳಿಯ ಪ್ರಮುಖ ರೂವಾರಿ ಎಂದು ಶಂಕಿಸಲಾಗಿದ್ದು, ಈತನೇ ದಾಳಿ ನಡೆಸಿದ್ದ ಆತ್ಮಹತ್ಯಾ ದಾಳಿಕೋರ ಮಹಮದ್ ದಾರ್ ನನ್ನು ಪ್ರಚೋದಿಸಿ ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಒಟ್ಟಾರೆ ಪುಲ್ವಾಮ ದಾಳಿಯ ಬಳಿಕ ಕಣಿವೆ ರಾಜ್ಯ ಅಕ್ಷರಶಃ ಸೇನೆಯಿಂದ ಸುತ್ತುವರೆಯಲ್ಪಟ್ಟಿದ್ದು, ಕಾಶ್ಮೀರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Comments are closed.