ರಾಷ್ಟ್ರೀಯ

ಪವಾರ್ ನಿವಾಸದಲ್ಲಿ ವಿಪಕ್ಷ ನಾಯಕರು, ‘ನಾವು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ’ ಎಂದ ಮಮತಾ

Pinterest LinkedIn Tumblr


ನವದೆಹಲಿ: ಬುಧವಾರ ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಯೋಜನೆಯಾಗಿದ್ದ ವಿಪಕ್ಷಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ವಿಪಕ್ಷ ನಾಯಕರು ಸಭೆ ಸೇರಿದ್ದರು. ಸಭೆಯ ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಾವು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ವಿಪಕ್ಷಗಳೆಲ್ಲಾ ಒಂದೇ ಅಜೆಂಡಾ ಹೊಂದಿದ್ದು, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಶರದ್ ಪವಾರ್ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು.

ಎಎಪಿ ರ‍್ಯಾಲಿಯಲ್ಲಿ ವಿಪಕ್ಷ ನಾಯಕರು:
ಶರದ್ ಪವಾರ್ ನಿವಾಸದಲ್ಲಿ ಜರುಗಿದ ಸಭೆಗೂ ಮೊದಲು ಬುಧವಾರ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ ವತಿಯಿಂದ ಜಂತರ್ ಮಂತರ್ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಎನ್ಸಿಪಿ ಶರದ್ ಪವಾರ್ ಮತ್ತು ಸಿಪಿಐಎಂನ ಸೀತಾರಾಮ್ ಯೆಚೂರಿ ಅವರು ಭಾಗಿಯಾಗಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ರ‍್ಯಾಲಿಯಲ್ಲಿ ಮಾತನಾಡಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಲೋಕತಂತ್ರ(ಪ್ರಜಾಪ್ರಭುತ್ವ) ನಮೋ ತಂತ್ರವಾಗಿ ರೂಪಾಂತರಗೊಂಡಿದೆ ಎಂದು ವಾಗ್ದಾಳಿ ನಡೆಸಿದರಲ್ಲದೆ, ದೇಶದ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತ ಕೆಟ್ಟದಾಗಿದೆ. ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಅಧಿಕಾರದಿಂದ ಹೊರಹಾಕಲು ಪ್ರತಿಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಏಕಮುಖವಾಗಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

Comments are closed.