ರಾಷ್ಟ್ರೀಯ

ಇತ್ತ ಉಗ್ರರಿಂದ ಯೋಧರ ಹತ್ಯೆ, ಅತ್ತ ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ..!

Pinterest LinkedIn Tumblr


ಜಮ್ಮು-ಕಾಶ್ಮೀರ: ಆತ್ಮಾಹುತಿ ದಾಳಿಯಲ್ಲಿ 44 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಪಾಕ್ ನಿಂದ ಮತ್ತೆ ಗುಂಡಿನ ದಾಳಿ ನಡೆದಿದೆ. ಜಮ್ಮು-ಕಾಶ್ಮೀರದ ಗಡಿಯ ಪೋಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.

ಒಂದು ಕಡೆ ಪಾಕಿಸ್ತಾನ ನಮಗೂ ನಿನ್ನೆ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಇನ್ನೊಂದೆಡೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿರುವುದು ಇದೀಗ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ.

ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಹೊಣೆಯನ್ನು ನಿಷೇಧಿತ ಜೈಶ್-ಇ-ಮೊಹಮದ್ ಸಂಘಟನೆ ಹೊತ್ತುಕೊಂಡಿದ್ದು, ಈ ಸಂಬಂಧ ವಿಡಿಯೋವನ್ನು ಹರಿಬಿಟ್ಟಿದೆ. ಆತ್ಮಾಹುತಿ ದಾಳಿಯನ್ನು ಆದಿಲ್ ಅಹ್ಮದ್ ದಾರ್ ನಡೆಸಿದ್ದು, ತನ್ನ ಕೃತ್ಯದ ಬಗ್ಗೆ ನರಹಂತಕ ಉಗ್ರ ವಿಡಿಯೋದಲ್ಲಿ ಕೊಚ್ಚಿಕೊಂಡಿದ್ದಾನೆ. ಕಾಶ್ಮೀರದ ಪುಲ್ವಾಮ ದಾಳಿ ಬಳಿಕ ಜೈಶ್-ಇ-ಮೊಹಮದ್ ಸಂಘಟನೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ದಾಳಿ ನಡೆಸುವ ಮುನ್ನವೇ ಆದಿಲ್ ದಾರ್, ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋದಲ್ಲಿ ತನ್ನ ಬೆಂಬಲಿಸುವಂತೆ ಕಾಶ್ಮೀರಿ ಮುಸ್ಲಿಮರಲ್ಲಿಯೂ ಆತ ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಬಿಡುಗಡೆ ಆಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಆದೀಲ್ ದಾರ್ ಹೇಳಿಕೊಂಡಿದ್ದಾನೆ.

ಜಮ್ಮು-ಶ್ರೀನಗರದ ಹೆದ್ದಾರಿಯಲ್ಲಿಯ ಸಿಆರ್‍ಪಿಎಫ್ ಯೋಧರ 72ಕ್ಕೂ ಅಧಿಕ ವಾಹನಗಳನ್ನು ಸ್ಫೋಟಿಸುವ ಗುರಿಯನ್ನು ಸಂಘಟನೆ ಆದಿಲ್ ನಿಗೆ ನೀಡಿತ್ತು. ಪ್ರತಿಯೊಂದು ವಾಹನದಲ್ಲಿ ಸುಮಾರು 40ರಿಂದ 45 ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಉಗ್ರರು ಪಡೆದುಕೊಂಡಿದ್ದರು. ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

2016 ಸೆಪ್ಟೆಂಬರ್ ನಲ್ಲಿ ನಡೆದ ಉರಿ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಉರಿ ದಾಳಿಗೆ ಪ್ರತೀಕರವಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು.

Comments are closed.