ರಾಷ್ಟ್ರೀಯ

ಮಾರ್ಚ್‌ 31ಕ್ಕೆ ವಿಸ್ತರಣೆಯಾದ ಕೇಬಲ್ ಟಿವಿ ಸಂಪರ್ಕಕ್ಕೆ ಹೊಸ ದರ ಆಯ್ಕೆಯ ಗಡುವು

Pinterest LinkedIn Tumblr

ಹೊಸದಿಲ್ಲಿ: ಕೇಬಲ್‌ ಮತ್ತು ಡಿಟಿಎಚ್‌ನ ಹೊಸ ದರಗಳಿಗೆ ಬದಲಾಗಲು ನಿಗದಿಪಡಿಸಿದ್ದ ಗಡುವನ್ನು ಮಾರ್ಚ್‌ 31ಕ್ಕೆ ಮುಂದೂಡಲಾಗಿದೆ ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ತಿಳಿಸಿದೆ. ಹೀಗಾಗಿ ಗ್ರಾಹಕರಿಗೆ ಹೊಸ ದರ ಹಾಗೂ ಚಾನೆಲ್‌ಗಳ ಆಯ್ಕೆ ಮಾಡಲು ಇನ್ನೂ ಒಂದೂವರೆ ತಿಂಗಳು ಕಾಲಾವಕಾಶ ಸಿಕ್ಕಿದೆ. ಅಲ್ಲಿಯವರೆಗೆ ಪ್ರಸಾರ ಎಂದಿನಂತೆ ಮುಂದುವರಿಯಲಿದೆ. ಈಗಾಗಲೇ 17 ಕೋಟಿ ಕೇಬಲ್‌, ಡಿಟಿಎಚ್‌ ಸಂಪರ್ಕಗಳ ಪೈಕಿ 9 ಕೋಟಿಯಷ್ಟು ಮಂದಿ ಹೊಸ ಪದ್ಧತಿಗೆ ಬದಲಾಗಿದ್ದಾರೆ.

ಕೇಬಲ್ ಟಿವಿ ಸಂಪರ್ಕಕ್ಕೆ ಹೊಸ ದರ ವ್ಯವಸ್ಥೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜಾರಿಗೊಳಿಸುತ್ತಿದೆ. ಇನ್ನು ಮುಂದೆ ವೀಕ್ಷಕರು ಪ್ರತಿ ಚಾನೆಲ್‌ಗೂ ನಿರ್ದಿಷ್ಟ ದರ ನೀಡಬೇಕಾಗುತ್ತದೆ. ಆದ್ದರಿಂದ ವೀಕ್ಷಕರು ತಮಗೆ ಬೇಕಾದ ವಾಹಿನಿಗಳನ್ನು ಆಯ್ಕೆ ಮಾಡಿಕೊಂಡು, ಅನಗತ್ಯ ಚಾನೆಲ್‌ಗಳನ್ನು ಬಿಡಬಹುದು. ಈ ಚಾನೆಲ್‌ಗಳ ಗುಚ್ಛವನ್ನು ಒದಗಿಸುವ ಬ್ರಾಡ್‌ಕಾಸ್ಟರ್‌ಗಳು ಸ್ಪರ್ಧಾತ್ಮಕ ರೀತಿಯಲ್ಲಿ ದರ ನಿಗದಿಪಡಿಸುವುದರಿಂದ, ಹೊಸ ದರಗಳು ವೀಕ್ಷಕರಿಗೆ ಹೊರೆಯಾಗುವ ಪ್ರಶ್ನೆಯೂ ಇಲ್ಲ. ಹೊಸ ವ್ಯವಸ್ಥೆಗೆ ವರ್ಗಾಯಿಸಿಕೊಳ್ಳಲು ಜ.31ರವರೆಗೆ ಸಮಯ ನೀಡಲಾಗಿತ್ತು. ಆದರೆ, ಮತ್ತೆ ಗಡುವು ವಿಸ್ತರಣೆಯಾಗಿದೆ. ಗ್ರಾಹಕರಿಗೆ ಹೊಸ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಲು, ಕೇಬಲ್‌ ಟಿವಿ ಆಪರೇಟರ್‌ಗಳಿಗೆ ಹೊಸ ವ್ಯವಸ್ಥೆಯ ಜಾರಿಗೆ ಒಗ್ಗಿಕೊಳ್ಳುವುದಕ್ಕಾಗಿ ಸಮಯಾವಧಿಯನ್ನು ವಿಸ್ತರಿಸಲಾಗಿದೆ.

ನೂತನ ವ್ಯವಸ್ಥೆಯ ಪ್ರಕಾರ, ಕೇಬಲ್‌ ಟಿವಿ ನಿಯಂತ್ರಕರು ಗ್ರಾಹಕರಿಗೆ 100 ಉಚಿತ ಚಾನೆಲ್‌ಗಳನ್ನು ನೀಡಬೇಕು; ಅದಕ್ಕೆ 130 ರೂ.ಗಳನ್ನು ಪಡೆಯಬೇಕು. ಉಳಿದಂತೆ ಗ್ರಾಹಕರು ಪಡೆಯುವ ಯಾವುದೇ ಚಾನೆಲ್‌ಗಳ ಗುಚ್ಛವನ್ನು ಅವರಿಗೆ ಒದಗಿಸಿ, ಅದಕ್ಕಾಗಿ ನಿಗದಿಪಡಿಸಲಾದ ದರವನ್ನು ಪಡೆಯಬೇಕು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಕೇಬಲ್‌ ಟಿವಿ ನಿಯಂತ್ರಕರು 200ರಿಂದ 300 ರೂ.ಗಳನ್ನು ಗ್ರಾಹಕರಿಂದ ಪಡೆಯುತ್ತಿದ್ದು, ತಾವೇ ನಿಗದಿಪಡಿಸಿದ ಚಾನೆಲ್‌ಗಳನ್ನು ಒದಗಿಸುತ್ತಿದ್ದರು. ಇನ್ನು ಮುಂದೆ ಆಯ್ಕೆಯ ಸ್ವಾತಂತ್ರ್ಯ ಗ್ರಾಹಕನದ್ದಾಗಿರಲಿದೆ. ಪ್ರಸ್ತುತ ಚಾನೆಲ್ ವೀಕ್ಷಣೆಯ ಮಧ್ಯವರ್ತಿಗಳಾದ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಈ ಕ್ಷೇತ್ರವನ್ನು ಆಳುತ್ತಿದ್ದರು. ಇನ್ನು ಮುಂದೆ ಅದು ಹಣ ನೀಡುವ ಗ್ರಾಹಕರ ಹಾಗೂ ಚಾನೆಲ್‌ ಒದಗಿಸುವ ಪ್ರಸಾರಕರ ನಡುವಿನ ವ್ಯವಹಾರ ಎನಿಸಲಿದೆ. ಹೀಗಾಗಿ ನಿರೀಕ್ಷಿತ ವಲಯದಿಂದ ಇದಕ್ಕೆ ಪ್ರತಿರೋಧ ಎದುರಾಗಿದ್ದು, ಹೊಸ ಪದ್ಧತಿ ಗ್ರಾಹಕನಿಗೆ ಅನನುಕೂಲ ಎಂಬಂತೆ ಬಿಂಬಿಸಲಾಗುತ್ತಿದೆ.

Comments are closed.