ರಾಷ್ಟ್ರೀಯ

ನೀವು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದ ಮುಲಾಯಂ: ಕೈ ಮುಗಿದ ಮೋದಿ

Pinterest LinkedIn Tumblr


ನವದೆಹಲಿ: ಕೇಂದ್ರ ಸರಕಾರದ ಕೊನೆಯ ಅಧಿವೇಶನ ದಿನದಂದು ಪ್ರಧಾನಿ ನರೇಂದ್ರ ಮೋದಿಗೆ ಅಚ್ಚರಿ ನೀಡುವ ಬೆಳವಣಿಗೆಯಾಗಿದೆ. ಮೋದಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ವಿಪಕ್ಷಗಳ ನಡುವೆ ಒಬ್ಬ ಹಿರಿಯ ಮುಖಂಡರೊಬ್ಬರು ಮೋದಿ ಸಪೋರ್ಟರ್ ಆಗಿ ಪರಿವರ್ತಿವಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳುವ ಮೂಲಕ ಇಡೀ ಸದನಕ್ಕೆ ಶಾಕ್ ಕೊಟ್ಟಿದ್ದಾರೆ. ತಮ್ಮ ರಾಜಕೀಯ ಜೀವನವಿಡೀ ಬಿಜೆಪಿಯನ್ನ ವಿರೋಧಿಸಿಕೊಂಡು ಬಂದಿದ್ದ ಮುಲಾಯಂ ಇವತ್ತು ಮೋದಿ ಪರವಾಗಿ ಧ್ವನಿ ಎತ್ತಿದ್ದಾರೆ.

“ಪ್ರಧಾನಿ ಅವರು ಪ್ರತಿಯೊಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಯತ್ನಿಸುತ್ತಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಇಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಮತ್ತೊಮ್ಮೆ ಗೆದ್ದು ಬನ್ನಿರಿ. ನೀವು (ಮೋದಿ) ಮತ್ತೊಮ್ಮೆ ಪ್ರಧಾನಿ ಆಗಿ,” ಎಂದು ಮುಲಾಯಂ ಸಿಂಗ್ ಯಾದವ್ ಹೇಳುತ್ತಾರೆ. ಮುಲಾಯಂ ಪಕ್ಕದಲ್ಲೇ ಆಸೀನರಾಗಿದ್ದ ಸೋನಿಯಾ ಗಾಂಧಿ ಅವರು ನಿರುಮ್ಮಳಾಗಿ ಕೂತು ಮಾತು ಕೇಳಿಸಿಕೊಂಡರು. ಮುಲಾಯಂ ಅವರ ಹೇಳಿಕೆ ಮುಗಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ನಸುನಗುತ್ತಲೇ ಕೈ ಮುಗಿದರು.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಸಿಂಗ್ ಹಾಗೂ ಅವರ ಮಗ ಅಖಿಲೇಶ್ ಯಾದವ್ ಅವರ ಮಧ್ಯೆ ಬಹಳ ದಿನಗಳಿಂದ ಭಿನ್ನಾಭಿಪ್ರಾಯಗಳಿವೆ. ಅಪ್ಪನ ಅಧಿಕಾರ ಮೊಟಕುಗೊಳಿಸಿ ಅಖಿಲೇಶ್ ಯಾದವ್ ಅವರು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಅಲ್ಲದೇ, ಉತ್ತರ ಪ್ರದೇಶದಲ್ಲಿ ಎಸ್​ಪಿ ಪಕ್ಷದ ಕಡುವೈರಿಯಾದ ಬಹುಜನ ಸಮಾಜ ಪಕ್ಷದ ಜೊತೆ ಅಖಿಲೇಶ್ ಯಾದವ್ ಅವರು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಬಿಜೆಪಿ ವಿರುದ್ಧ ವಿಪಕ್ಷಗಳಿಗೆ ಇರುವ ಬ್ರಹ್ವಾಸ್ತ್ರವಾಗಿದೆ.

ಈ ಹಿನ್ನೆಲೆಯಲ್ಲಿ ಮುಲಾಯಮ್ ಸಿಂಗ್ ಯಾದವ್ ಅವರು ಮೋದಿಯನ್ನ ಹೊಗಳಿರುವ ಘಟನೆ ಸಾಕಷ್ಟು ಚರ್ಚೆ, ವಿಶ್ಲೇಷಣೆಗಳಿಗೆ ನಾಂದಿ ಹಾಡಲಿದೆ. ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಅವರೇನಾದರೂ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ನೀಡುವ ಸಾಧ್ಯತೆ ಇದೆಯಾ? ಬೆಂಬಲ ನೀಡಿದರೆ ಅದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಎಷ್ಟರಮಟ್ಟಿಗೆ ಸಹಾಯವಾಗುತ್ತದೆ? ಎಂಬೆಲ್ಲಾ ಪ್ರಶ್ನೆಗಳಿವೆ.

ಆದರೆ, ಸಂಸತ್​ನಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಮೋದಿ ಅವರನ್ನು ಹೊಗಳಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಲು ಆಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಸಾಜನ್ ಅಭಿಪ್ರಾಯಪಟ್ಟಿದ್ದಾರೆ.

ಅಧಿವೇಶನದ ಕೊನೆಯ ದಿನವಾದ್ದರಿಂದ ಪ್ರತಿಯೊಬ್ಬ ಸಂಸದನೂ ಇತರರಿಗೆ ಶುಭ ಹಾರೈಕೆ ಮಾಡುವುದು ಒಂದು ರೀತಿಯಲ್ಲಿ ಸಂಪ್ರದಾಯವಾಗಿದೆ. ಅವರು ಪ್ರಧಾನಿ ಮೋದಿ ಅವರನ್ನೂ ಒಳಗೊಂಡಂತೆ ಎಲ್ಲರಿಗೂ ವಿಜಯ ಪ್ರಾಪ್ತಿಯಾಗಲಿ ಎಂದು ಹಾರೈಸಿದ್ದಾರೆ. ಇಂಥ ಮುಖಂಡರಿಂದ ಬಿಜೆಪಿಯವರು ಕಲಿತುಕೊಳ್ಳಬೇಕಿದೆ. ಅದು ದೊಡ್ಡ ಮುಖಂಡನ ವಿಶಾಲ ಮನಸ್ಸು ಎಂದು ಸುನೀಲ್ ಸಿಂಗ್ ಹೇಳಿದ್ದಾರೆ.

Comments are closed.