ರಾಷ್ಟ್ರೀಯ

ವೇದಿಕೆಯ ಮೇಲೆ ಪ್ರಧಾನಿ ಮೋದಿ ಇರುವಾಗಲೇ ಸಹೋದ್ಯೋಗಿ ಜೊತೆ ಅಸಭ್ಯವಾಗಿ ನಡೆದುಕೊಂಡ ಬಿಜೆಪಿ ಸಚಿವ

Pinterest LinkedIn Tumblr

ಅಗರ್ತಲಾ: ಪ್ರಧಾನಿ ಮೋದಿ ಮತ್ತು ಸಿಎಂ ಬಿಪ್ಲಬ್ ದೇಬ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ತ್ರಿಪುರಾ ಸಚಿವನೋರ್ವ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾನೆ.

ತ್ರಿಪುರಾ ಸಚಿವ ಮನೋಜ್ ಕುಮಾರ್ ಕಾಂತಿ ದೇಬ್ ಇಂತಹ ನೀಚ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದು, ಇದೀಗ ಮಾಧ್ಯಮಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿರುವ ಮಹಿಳೆ ಕೂಡ ತ್ರಿಪುರಾದ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಸಚಿವರಾಗಿದ್ದು, ಸಾರ್ವಜನಿಕವಾಗಿ ಇಂತಹ ಮುಜುಗರವನ್ನೆದುರಿಸಿದ್ದಾರೆ.

ಈ ವಿಡಿಯೋ ಇದೀಗ ತ್ರಿಪುರಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದು, ವಿಪಕ್ಷಗಳು ಮನೋಜ್ ಕುಮಾರ್ ಕಾಂತಿ ಅವರ ರಾಜಿನಾಮೆಗೆ ಅಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಡ ಪಕ್ಷ ಮುಖಂಡ ಬಿಜನ್ ಧಾರ್ ಅವರು ಸಾರ್ವಜನಿಕವಾಗಿ ಎಲ್ಲರೂ ನೋಡುತ್ತಿದ್ದಾರೆ ಎಂಬ ಪರಿಜ್ಞಾನ ಕೂಡ ಇಲ್ಲದೆ ಮಹಿಳೆ ಮೇಲೆ ಕೈಹಾಕಿ ಮನೋಜ್ ದೇಬ್ ತಮ್ಮ ಗೋಮುಖ ವ್ಯಾಘ್ರತನವನ್ನು ಪ್ರದರ್ಶನ ಮಾಡಿದ್ದಾರೆ. ಈ ಕೂಡಲೇ ಸಿಎಂ ಬಿಪ್ಲಬ್ ದೇಬ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಅಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಆರೋಪಿ ಸಚಿವ ಮನೋಜ್ ದೇಬ್, ಇದು ತಮ್ಮ ವಿರುದ್ಧ ಹೆಣೆದಿರುವ ಷಡ್ಯಂತ್ರ, ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

Comments are closed.