ರಾಷ್ಟ್ರೀಯ

ಶಬರಿಮಲೆಗೆ ಪ್ರವೇಶ ಮಾಡಿದ್ದು ಇಬ್ಬರೇ ಎಂದ ಕೇರಳ ಸರಕಾರ

Pinterest LinkedIn Tumblr


ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಗೆ 51 ಮಹಿಳೆಯರು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದ ಕೇರಳ ಸರ್ಕಾರ ಇಂದು ಯು ಟರ್ನ್ ಹೊಡೆದಿದ್ದು, ದೇವಾಲಯಕ್ಕೆ ಇಬ್ಬರು ಮಾತ್ರ ಪ್ರವೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

ಕೇರಳ ಸರ್ಕಾರ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದುವರೆಗೂ ಇಬ್ಬರು ಮಹಿಳೆಯರು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರದಿ ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ನೀಡಿದ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಯ್ಯಪ್ಪ ಸನ್ನಿಧಿಗೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದೇ ವೇಳೆ ಶ್ರೀಲಂಕಾ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳ ಪೊಲೀಸರು ಅಯ್ಯಪ್ಪ ಸನ್ನಿಧಿ ದರ್ಶನ ಪಡೆಯಲು ಇಷ್ಟಪಟ್ಟ ಮಹಿಳೆಯರಿಗೆ ಬಿಗಿ ಭದ್ರತೆ ನೀಡುವುದಾಗಿ ತಿಳಿಸಿದರು. ಇದರಂತೆ ಜನವರಿಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದರು.

ಈ ಹಿಂದ ಕೇರಳ ಸರ್ಕಾರದ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿ 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ಆದರೆ ಈ ವರದಿಯನ್ನು ಘನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಮಾಹಿತಿಯಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ದರ್ಶನ ಪಡೆದಿದ್ದಾಗಿ ವಿವರಿಸಲಾಗಿತ್ತು. ಅಲ್ಲದೇ ದೇಗುಲ ಪ್ರವೇಶ ಮಾಡಲು ಸುಮಾರು 16 ಸಾವಿರ ಮಂದಿ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದರು ಹಾಗೂ ಆದರಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಸಂಖ್ಯೆ 7,500 ಇತ್ತು ಎಂದು ಮಾಹಿತಿಯಲ್ಲಿ ನೀಡಲಾಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮಹಿಳೆಯಲ್ಲಿ 51 ಮಂದಿ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ದೊರೆಯುವ ದೇವಾಲಯದ ಟಿಕೆಟ್ ಪಡೆದು, ಆಧಾರ್ ಮಾಹಿತಿ ನೀಡಿಯೇ ದರ್ಶನ ಪಡೆದಿದ್ದಾರೆ. ಆದರೆ ಭಕ್ತರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

Comments are closed.