ರಾಷ್ಟ್ರೀಯ

ರೈತರಿಗೆ ಹೊಸ ಕೃಷಿ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ

Pinterest LinkedIn Tumblr

ಹೊಸದಿಲ್ಲಿ, ಜ. 25: ರೈತರ ಆದಾಯವನ್ನು ಹೆಚ್ಚಿಸಲು ಉತ್ತೇಜನ ನೀಡುವ ಕೃಷಿ ಪ್ಯಾಕೇಜನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ ರುಪಾಲಾ ಹೇಳಿದ್ದಾರೆ.

ತೆಲಂಗಾಣ ಹಾಗೂ ಒಡಿಶಾ ಸರ್ಕಾರಗಳ ಮಾದರಿಯಲ್ಲಿ ರೈತರಿಗೆ ನೇರ ಬೆಂಬಲ ಒದಗಿಸುವ ಯೋಜನೆ ಬಗ್ಗೆ ಕೇಂದ್ರ ಸಚಿವರು ನೀಡಿದ ಮೊಟ್ಟಮೊದಲ ಹೇಳಿಕೆ ಇದಾಗಿದೆ. ಕೃಷಿ ಕ್ಷೇತ್ರದ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚುನಾವಣೆ ಘೋಷಣೆಗೆ ಮುನ್ನ ಹೊಸ ಪ್ಯಾಕೇಜ್ ಘೋಷಿಸಲು ಮುಂದಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ಆದರೆ ಈ ಪ್ಯಾಕೇಜ್ ಫೆ. 1ರಂದು ಮಂಡನೆಯಾಗುವ ಕೇಂದ್ರ ಬಜೆಟ್‌ನ ಭಾಗವಾಗಿರುತ್ತದೆಯೇ ಅಥವಾ ಅದಕ್ಕೂ ಮುನ್ನವೇ ಘೋಷಣೆಯಾಗುತ್ತದೆಯೇ ಎಂಬ ಸುಳಿವನ್ನು ಸಚಿವರು ಬಿಟ್ಟುಕೊಟ್ಟಿಲ್ಲ. 2019-20ರ ಬಜೆಟ್‌ಗೆ ಕೃಷಿ ಸಚಿವಾಲಯದಿಂದ ಮಾಡಿರುವ ಶಿಫಾರಸ್ಸುಗಳ ವಿವರಗಳನ್ನು ಬಹಿರಂಗ ಪಡಿಸಲು ಕೂಡಾ ಅವರು ನಿರಾಕರಿಸಿದರು.

ಸಕಾಲಿಕವಾಗಿ ಸಾಲ ಮರುಪಾವತಿ ಮಾಡಿದ ರೈತರ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆಯನ್ನು ಘೋಷಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಇದು ಬೊಕ್ಕಸಕ್ಕೆ 15 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಗೆ ಕಾರಣವಾಗುತ್ತದೆ. ಅಂತೆಯೇ ಆಹಾರ ಧಾನ್ಯಗಳಿಗೆ ಬೆಳೆವಿಮೆ ಸೌಲಭ್ಯ ಪಡೆದ ರೈತರ ವಿಮಾ ಕಂತನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ತೆಲಂಗಾಣ ಹಾಗೂ ಒಡಿಶಾ ಮಾದರಿಯಲ್ಲಿ ನೇರವಾಗಿ ರೈತರಿಗೆ ನಿರ್ದಿಷ್ಟ ಮೊತ್ತದ ಹಣ ವರ್ಗಾವಣೆ ಮಾಡುವ ಯೋಜನೆಯ ಕಾರ್ಯಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ರೈತರ ಆಕ್ರೋಶ ಕಾರಣ ಎಂದು ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

Comments are closed.