ರಾಷ್ಟ್ರೀಯ

2025ರ ಒಳಗೆ ಮಂದಿರ ನಿರ್ಮಾಣವಾಗಬೇಕು: ಆರ್​ಎಸ್​ಎಸ್​ನ ಭಯ್ಯಾಜಿ ಜೋಶಿ

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ವಿಳಂಬ ಧೋರಣೆ ತೋರುತ್ತಿರುವುದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಚುನಾವಣೆ ನಡೆಯುವ ಮುನ್ನ ರಾಮಮಂದಿರ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ, ಇದೀಗ ತನ್ನ ಹೇಳಿಕೆಯಿಂದ ಹಿಂದೆ ಸರಿದಿರುವ ಆರ್​ಎಸ್​ಎಸ್​ 2025ರ ಒಳಗೆ ಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದೆ.

ಆರ್​ಎಸ್​ಎಸ್​ನ ಎರಡನೇ ಮುಖ್ಯಸ್ಥ ಭಯ್ಯಾಜಿ ಜೋಶಿ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ, ಅವರು ರಾಮಮಂದಿರ ನಿರ್ಮಾಣ ಗಡುವನ್ನು ಆರು ವರ್ಷಗಳ ಕಾಲ ವಿಸ್ತರಣೆ ಮಾಡಿರುವುದು ಕುತೂಹಲ ಸೃಷ್ಟಿಸಿದೆ. “1952ರಲ್ಲಿ ಸೋಮನಾಥ ದೇವಾಲಯ ನಿರ್ಮಾಣ ಮಾಡಲಾಯಿತು. ಅದಾದ ನಂತರ ದೇಶ ಅಭಿವೃದ್ಧಿ ವೇಗ ಪಡೆದುಕೊಂಡಿತ್ತು. 2025ರಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ನಂತರ ದೇಶಕ್ಕೆ ಒಳಿತಾಗಲಿದೆ. ನಂತರ 150 ವರ್ಷಗಳ ಕಾಲ ದೇಶಕ್ಕೆ ಯಾವುದೇ ಕೇಡು ಎದುರಾಗದು,” ಎಂದು ಹೇಳಿಕೊಂಡಿದ್ದಾರೆ.

ನಾವು ಯಾವುದೇ ಸಮುದಾಯದ ಜೊತೆಗೂ ಸಂಘರ್ಷಕ್ಕೆ ಇಳಿದಿಲ್ಲ ಎಂದಿರುವ ಬಯ್ಯಾಜಿ, “ಬೇರೆ ಸಮುದಾಯದ ಜೊತೆ ಸಂಘರ್ಷ ನಡೆಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ನಾವು ಏನನ್ನೂ ಬೇಡುತ್ತಿಲ್ಲ. ನಾವು ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ಸುಗ್ರೀವಾಜ್ಞೆ ಮೂಲಕ ಮಾತ್ರ ಮಂದಿರ ನಿರ್ಮಾಣ ಮಾಡಬಹುದಾಗಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಜೋಶಿ ತಿಳಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕಟ್ಟುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ, “ರಾಮ ಮಂದಿರ ವಿಚಾರ ಸುಪ್ರೀಂಕೋರ್ಟ್​​ ಅಂಗಳದಲ್ಲಿದೆ. ಕೋರ್ಟ್​​ನಿಂದ ಬರುವ ಆದೇಶ ಆಧರಿಸಿ ಕೇಂದ್ರ ಮುಂದಿನ ಕ್ರಮ ಕೈಗೊಳ್ಳಲಿದೆ” ಎಂದು ಮೋದಿ ಹೇಳಿದ್ದರು. ಈ ಬಗ್ಗೆ ಆರ್​ಎಸ್​ಎಸ್​ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಆರ್​ಎಸ್​ಎಸ್​ ಆಗ್ರಹಿಸಿದೆ.

Comments are closed.