ರಾಷ್ಟ್ರೀಯ

ಸಿಬಿಐ ರಕ್ಷಣೆಗೆ ನಿಂತಿದ್ದಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ -ಅಲೋಕ್ ವರ್ಮಾ

Pinterest LinkedIn Tumblr


ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಿದ ಬೆನ್ನಲ್ಲೇ ಈ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸಿಬಿಐ ಉಳಿಸಲು ಹೋರಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನನ್ನನ್ನು ಬಲಿಪಶು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲೋಕ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಂಬಂಧ ತನಿಖೆ ನಡೆಸಿದ್ದ ಕೇಂದ್ರ ವಿಚಕ್ಷಣ ದಳ ವರದಿ ಸಲ್ಲಿಕೆ ಮಾಡಿತ್ತು. ಇದರ ಆಧಾರದ ಮೇಲೆ ಉನ್ನತಾಧಿಕಾರ ಸಮಿತಿಯು ಅಲೋಕ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಅವರನ್ನು ಸದ್ಯಕ್ಕೆ ದೆಹಲಿ ಅಗ್ನಿಶಾಮಕ ದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ವರ್ಮಾ ಮೌನ ಮುರಿದಿದ್ದಾರೆ. “ಹಲವು ಪ್ರಮುಖ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ತರುವಲ್ಲಿ ಸಿಬಿಐ ಪಾತ್ರ ಪ್ರಮುಖವಾಗಿದೆ. ಹಾಗಾಗಿ, ಈ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಯಾವುದೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಬಾಹ್ಯ ಒತ್ತಡ ಇಲ್ಲದೆ ಸಿಬಿಐ ಕೆಲಸ ಮಾಡುವಂತಾಗಬೇಕು. ನಾನು ಸಂಸ್ಥೆಯ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದೆ. ಆದರೆ, ಅದನ್ನು ನಾಶ ಮಾಡುವ ಪ್ರಯತ್ನಗಳು ನಡೆದವು,” ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅಲೋಕ್​ ವರ್ಮಾ, “ಸುಳ್ಳು ಆರೋಪ ಸೃಷ್ಟಿಸಿ ನನ್ನನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾ ಮಾಡಿರುವುದು ಬೇಸರದ ಸಂಗತಿ” ಎಂದಿದ್ದಾರೆ.

ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್​​ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಜಯ ಸಿಕ್ಕಿತ್ತು. ಅಲ್ಲದೆ, ಸುಪ್ರೀಂಕೋರ್ಟ್​ ಸಿಬಿಐ ನಿರ್ದೇಶಕ ಹುದ್ದೆಗೆ ಅವರನ್ನು ಮರುನೇಮಕ ಮಾಡಿತ್ತು. ಇದಾದ ಬೆನ್ನಲ್ಲೇ ಮೋದಿ ನೇತೃತ್ವದ ಉನ್ನತಾಧಿಕಾರಿ ಸಮಿತಿ ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸುವ ನಿರ್ಧಾರ ತೆಗೆದುಕೊಂಡಿದೆ.

Comments are closed.