ರಾಷ್ಟ್ರೀಯ

ಮೇಲ್ಜಾತಿಗೆ ಮೀಸಲಾತಿ ಜಾರಿಗೆ ಇರುವ ತಾಂತ್ರಿಕ ಅಡಚಣೆಗಳೇನು?

Pinterest LinkedIn Tumblr


ಬೆಂಗಳೂರು: ಚುನಾವಣೆಗೆ ಮುನ್ನ ಕೇಂದ್ರ ಸರಕಾರದ ಮಾಸ್ಟರ್ ಸ್ಟ್ರೋಕ್ ಹೊಡೆದಿದೆ. ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಯ ಜನರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಕ್ರಮಕ್ಕೆ ಕೇಂದ್ರ ಸಂಪುಟವು ಸೋಮವಾರ ಅನುಮೋದನೆ ನೀಡಿದೆ. ಈ ಬೆಳವಣಿಗೆಯಾಗುತ್ತಲೇ ದೇಶಾದ್ಯಂತ ಪರ ವಿರೋಧ ಚರ್ಚೆಗಳು ಭುಗಿಲೆದ್ದಿವೆ. ಒಂದು ಕಡೆ ಇದು ಕೇವಲ ಚುನಾವಣೆ ಗಿಮಿಕ್ ಎಂಬ ಅಭಿಪ್ರಾಯಗಳು ಕೇಳಿಬಂದರೆ, ಮತ್ತೊಂದು ಕಡೆ ಇದು ಮೀಸಲಾತಿಯ ಉದ್ದೇಶವನ್ನೇ ವಿಫಲಗೊಳಿಸಲು ನಡೆದಿರುವ ಚಿತಾವಣಿ ಎಂಬ ಅನಿಸಿಕೆಗಳೂ ವ್ಯಕ್ತವಾಗುತ್ತಿವೆ. ಇದೇನೇ ಇದ್ದರೂ, ವಾಸ್ತವ ನೆಲೆಯಲ್ಲಿ ನಿಂತು ನೋಡಿದಾಗ, ಶೇ. 10 ಮೀಸಲಾತಿಯನ್ನು ಕೇಂದ್ರ ಸರಕಾರ ಚುನಾವಣೆಗೆ ಮುನ್ನ ಜಾರಿಗೆ ತರಲು ಸಾಧ್ಯವೇ?

ಮೊದಲನೆಯದಾಗಿ, ಮೀಸಲಾತಿಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಶೇ. 50ಕ್ಕೆ ಮಿತಿಗೊಳಿಸಿದೆ. ಸಂವಿಧಾನದ ಅಂಶಗಳನ್ನ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದೆ. ಈಗಾಗಲೇ ಹಿಂದುಳಿದವರು, ದಲಿತರು ಮೊದಲಾದವರಿಗೆ ನೀಡಿರುವ ಒಟ್ಟಾರೆ ಮೀಸಲಾತಿಯು ಶೇ. 49 ಇದೆ. ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಒದಗಿಸಿದರೆ ಸುಪ್ರೀಂ ಕೊಟ್ಟ ಮಿತಿಯು ಮೀರಿ ಹೋಗುತ್ತದೆ. ಇದು ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತದೆ.

ಕೇಂದ್ರವು ತನ್ನ ನಿರ್ಧಾರಕ್ಕೆ ಬದ್ಧವಾಗಿ ಇದನ್ನು ಜಾರಿಗೊಳಿಸಲೇಬೇಕೆಂದರೆ ಮೀಸಲಾತಿ ವಿಚಾರವಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಬಹುದು. ಈ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಸಂವಿಧಾನ ತಿದ್ದುಪಡಿ ವಿಧೇಯಕವು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ತುಂಬಿದ ಸದನಗಳಲ್ಲಿ ಕಟ್ಟುನಿಟ್ಟಾಗಿ ಅನುಮೋದನೆಯಾಗಬೇಕು.

ಎನ್​ಡಿಎ ಸರಕಾರಕ್ಕೆ ಲೋಕಸಭೆಯಲ್ಲಿ ಬಹುಸಂಖ್ಯೆ ಇದೆ. ಆದರೆ, ರಾಜ್ಯಸಭೆಯಲ್ಲಿ ಅಷ್ಟು ಬಲ ಇಲ್ಲ. ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಹಸಿರುನಿಶಾನೆ ಸಿಕ್ಕುತ್ತದಾದರೂ ರಾಜ್ಯಸಭೆಯಲ್ಲಿ ಅವಕಾಶ ತೀರಾ ಕಡಿಮೆ. ರಾಜ್ಯಸಭೆಯಲ್ಲಿರುವ ಮೇಲ್ವರ್ಗ ಸಮುದಾಯಕ್ಕೆ ಸೇರಿದ ಸಂಸದರನ್ನು ಸೆಳೆದುಕೊಂಡು ಮಸೂದೆಗೆ ಅಂಗೀಕಾರ ಹಾಕಿಸುವ ಒಂದು ಅವಕಾಶ ಮೋದಿ ಅವರ ಮುಂದಿದೆ. ಆದರೆ, ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರುವಷ್ಟರಲ್ಲಿ ಈ ಪ್ರಕ್ರಿಯೆ ಮುಗಿಯಬೇಕಾಗುತ್ತದೆ. ಇದು ಅಷ್ಟು ಸುಲಭವಂತೂ ಅಲ್ಲ.

ಆದರೆ, ಕೇಂದ್ರ ಸರಕಾರವು ನಾಳೆಯೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರು ಎಂದು ಹೇಗೆ ಗುರುತಿಸಲಾಗುವುದು?

ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು
5 ಹೆಕ್ಟೇರ್​ಗಿಂತ (12 ಎಕರೆ) ಕಡಿಮೆ ಕೃಷಿಭೂಮಿ ಹೊಂದಿರಬೇಕು
1 ಸಾವಿರ ಚದರ ಅಡಿಗಿಂತ ಹೆಚ್ಚು ವ್ಯಾಪ್ತಿಯ ಮನೆ ಹೊಂದಿರಬಾರದು

ಗೊಂದಲದಲ್ಲಿ ವಿಪಕ್ಷಗಳು:
ಹಿಂದುಳಿತ ಮೇಲ್ಜಾತಿಗಳಿಗೆ ಮೀಸಲಾತಿ ಕೊಡುವ ಕ್ರಮವು ಒಂದು ದೊಡ್ಡ ವೋಟ್ ಬ್ಯಾಂಕ್​ಗೆ ಕೈಹಾಕಿದಂತಾಗಿದೆ. ಬಿಜೆಪಿಯ ಪಾಲಿಗೆ ಇದು ಅಕ್ಷರಶಃ ಬ್ರಹ್ಮಾಸ್ತ್ರವಾಗಿದೆ. ಆರ್ಥಿಕವಾಗಿ ಹಿಂದುಳಿದಿದ್ದೂ ಯಾವುದೇ ಮೀಸಲಾತಿಯಿಂದ ವಂಚಿತವಾಗಿರುವ ದೊಡ್ಡ ಪ್ರಮಾಣವೇ ದೇಶದಲ್ಲಿದೆ. ಹೀಗಾಗಿ ವಿಪಕ್ಷಗಳು, ಅದರಲ್ಲೂ ಕಾಂಗ್ರೆಸ್ ಪಕ್ಷವು ಈ ಮೀಸಲಾತಿ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸಲು ಸಾಧ್ಯವಾಗದು. ಕೇರಳದ ಸಿಎಂ ಪಿಣಾರಯಿ ವಿಜಯನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಮೀಸಲಾತಿ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರಾದರೂ, ತಾಕತ್ತಿದ್ದರೆ ತಿದ್ದುಪಡಿ ಮಸೂದೆಯನ್ನು ಸಂಸತ್​ನಲ್ಲಿ ಮಂಡಿಸುವಂತೆ ಕೇಂದ್ರಕ್ಕೆ ಸವಾಲನ್ನೂ ಹಾಕಿದ್ದಾರೆ.

ಅಲ್ಲದೇ ಈ ಹಿಂದೆ, ಪಟೇಲ್ ಮೊದಲಾದ ನಿರ್ದಿಷ್ಟ ಮೇಲ್ವರ್ಗ ಸಮುದಾಯಗಳ ಮೀಸಲಾತಿಗೆ ದೊಡ್ಡ ಹೋರಾಟಗಳೇ ನಡೆದಿದ್ದವು. ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರಾಗಿರುವ ಅನೇಕ ಮೇಲ್ವರ್ಗ ಸಮುದಾಯಗಳು ಇದೇ ಮೀಸಲಾತಿ ವಿಚಾರವಾಗಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದವು. ಕೆಲ ಚುನಾವಣೆಗಳಲ್ಲಿ ಇದು ವ್ಯಕ್ತವಾಗಿಯೂ ಇದೆ. ಮೆಲ್ವರ್ಗದ ಸಮುದಾಯದ ಮತಗಳನ್ನ ಗಟ್ಟಿ ಮಾಡಿಕೊಳ್ಳಲು ಬಿಜೆಪಿಯು ಈ ನೂತನ ಮೀಸಲಾತಿ ಅಸ್ತ್ರ ಹೂಡಿರುವುದು ನಿಚ್ಚಳವಾಗಿದೆ.

Comments are closed.