ರಾಷ್ಟ್ರೀಯ

ಎಂಬತ್ತರ ದಶಕದ ಸಿಖ್ ವಿರೋಧಿ ದಂಗೆ: ಮಾಜಿ ಕಾಂಗ್ರೆಸ್ಸಿಗ ಸಜ್ಜನ್ ಕುಮಾರ್ ಕೋರ್ಟ್​ಗೆ ಶರಣು

Pinterest LinkedIn Tumblr


ನವದೆಹಲಿ: ಎಂಬತ್ತರ ದಶಕದ ಸಿಖ್ ವಿರೋಧಿ ದಂಗೆ ಕೃತ್ಯದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಇಂದು ಸೋಮವಾರ ಕರ್ಕರ್​ಡುಮಾ ಕೋರ್ಟ್​ಗೆ ಶರಣಾಗಿದ್ದಾರೆ. ಸಜ್ಜನ್ ಕುಮಾರ್ ಅವರು ಮಾಂಡೋಲಿ ಕಾರಾಗೃಹದ 14ನೇ ಸೆಲ್ ನಂಬರ್ ಜೈಲಿನಲ್ಲಿ ಕೈದಿಯಾಗಲಿದ್ದಾರೆ. ಇದೇ ಪ್ರಕರಣದಲ್ಲಿ ಅಪರಾಧಿಗಳಾಗಿ ಶಿಕ್ಷೆಗೆ ಒಳಪಟ್ಟಿರುವ ಮಾಜಿ ಕಾಂಗ್ರೆಸ್ಸಿಗರಾದ ಮಹೇಂದ್ರ ಯಾದವ್ ಮತ್ತು ಕಿಶನ್ ಖೋಕರ್ ಅವರೂ ಕೂಡ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಅದಿತಿ ಗರ್ಗ್ ಮುಂದೆ ಶರಣಾಗಿದ್ಧಾರೆ. ಈ ಇಬ್ಬರನ್ನು ತಿಹಾರ್ ಜೈಲಿನಲ್ಲಿರಿಸಲಾಗಿದೆ. 73 ವರ್ಷದ ಸಜ್ಜನ್ ಕುಮಾರ್ ಅವರು ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದ್ದು, ಸರ್ವೋಚ್ಚ ನ್ಯಾಯಾಲಯದಿಂದ ಶಿಕ್ಷೆಗೆ ತಡೆ ಬರುವವರೆಗೂ ಜೈಲಿನಲ್ಲೇ ಬಂಧಿಯಾಗಿರಲಿದ್ದಾರೆ.

1984ರ ಸಿಖ್ ವಿರೋಧಿ ಗಲಭೆಗಳ ಪೈಕಿ ಒಂದೆರಡು ಘಟನೆಗಳಲ್ಲಿ ಸಜ್ಜನ್ ಕುಮಾರ್ ಸೇರಿದಂತೆ ಆರು ಜನರು ಭಾಗಿಯಾಗಿದ್ಧಾರೆಂದು ದೆಹಲಿ ಹೈಕೋರ್ಟ್ ಅಭಿಪ್ರಾಯಕ್ಕೆ ಬಂದಿದೆ. ಡಿಸೆಂಬರ್ 19ರಂದು ಇವರೆಲ್ಲರಿಗೂ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿತು.

1984 ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರನ್ನು ಅವರ ಬಾಡಿಗಾರ್ಡ್​ಗಳಿಬ್ಬರು ಕೊಂದುಹಾಕಿದ್ದರು. ಅವರಿಬ್ಬರು ಸಿಖ್ ಜನಾಂಗದವರಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತತ್​ಕ್ಷಣವೇ ಸಿಖ್​ವಿರೋಧಿ ದಂಗೆಗಳೆದ್ದಿದ್ದವು. ಈ ಗಲಭೆಗಳಿಗೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇತ್ತೆಂಬ ಆರೋಪವಿದೆ. 1984ರ ನವೆಂಬರ್ 1-2ರಂದು ದೆಹಲಿಯ ಪಲಮ್ ಕಾಲೊನಿಯ ರಾಜ್ ನಗರ್ ಎಂಬಲ್ಲಿ ಸಿಖ್ ಸಮುದಾಯದ ಐವರನ್ನು ಕೊಲ್ಲಲಾಗಿತ್ತು. ಅದೇ ಏರಿಯಾದ ಮತ್ತೊಂದು ಭಾಗದಲ್ಲಿ ಗುರುದ್ವಾರವೊಂದನ್ನು ಸುಟ್ಟುಹಾಕಲಾಯಿತು. ಈ ನಿರ್ದಿಷ್ಟ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಹಾಗೂ ಐವರು ಇತರರ ಮೇಲಿನ ಆರೋಪ ಸಾಬೀತಾಗಿದ್ದು, ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾಜಿ ಕಾಂಗ್ರೆಸ್ ನಗರಪಾಲಿಕೆ ಸದಸ್ಯ ಬಲ್ವಾನ್ ಖೋಕರ್, ಮಾಜಿ ಶಾಸಕರಾದ ಕಿಶನ್ ಖೋಕರ್ ಹಾಗೂ ಮಹೇಂದರ್ ಯಾದವ್, ನಿವೃತ್ತ ನೌಕಾ ಪಡೆ ಅಧಿಕಾರಿ ಕ್ಯಾಪ್ಟನ್ ಭಾಗ್ಮಲ್, ಗಿರಿಧರಿ ಲಾಲ್ ಅವರು ಶಿಕ್ಷೆಗೊಳಗಾಗಿರುವ ಇತರ ಐವರಾಗಿದ್ದಾರೆ.

ಡಿಸೆಂಬರ್ 17ರಂದು ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಡಿಸೆಂಬರ್ 31ರಷ್ಟರಲ್ಲಿ ಶರಣಾಗುವಂತೆ ಆರು ದೋಷಿಗಳಿಗೆ ಆದೇಶ ನೀಡಿತು. ವೈಯಕ್ತಿಕ ಕಾರಣವೊಡ್ಡಿ ಜನವರಿ 30ರವರೆಗೂ ಜಾಮೀನು ನೀಡುವಂತೆ ಸಜ್ಜನ್ ಕುಮಾರ್ ಮಾಡಿಕೊಂಡ ಮನವಿಯನ್ನು ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಇವತ್ತು ಶರಣಾಗದೇ ಬೇರೆ ವಿಧಿ ಇರಲಿಲ್ಲ. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಎಲ್ಲಾ ಆರು ದೋಷಿಗಳೂ ಜೈಲುಪಾಲಾದಂತಾಗಿದೆ.

Comments are closed.