ರಾಷ್ಟ್ರೀಯ

ಕೃಷಿ ಸಾಲಮನ್ನಾಕ್ಕೆ ಕಡಿವಾಣ ಹಾಕಿ…ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಆರ್ ಬಿಐ

Pinterest LinkedIn Tumblr

ನವದೆಹಲಿ: ಕೃಷಿ ಸಾಲಮನ್ನಾ ಪ್ರವೃತ್ತಿಗೆ ಕಡಿವಾಣ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ. ಅಲ್ಲದೆ ರಾಜ್ಯಸರ್ಕಾರಗಳ ಸಾಲಮನ್ನಾ ನಿರ್ಧಾರದಿಂದ ಭವಿಷ್ಯದಲ್ಲಿ ಬ್ಯಾಂಕ್ ಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಿದೆ.

ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ಆರ್ ಬಿಎ ಎಚ್ಚರಿಕೆ ನೀಡಿದ್ದು, ಸಾಲಮಮ್ಮಾ ಪ್ರವೃತ್ತಿಗೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಕೃಷಿ ಸಾಲ ವಿತರಣೆ ಕುಂಠಿತವಾಗುವ ಅಪಾಯವಿದೆ. ಅಲ್ಲದೆ ಬ್ಯಾಂಕ್‌ ಕಾರ್ಯಾಚರಣೆ, ಠೇವಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದೂ ಆರ್ ಬಿಐ ಎಚ್ಚರಿಕೆ ನೀಡಿದೆ.

‘ರಾಜ್ಯ ಸರ್ಕಾರಗಳ ಕೃಷಿ ಸಾಲಮನ್ನಾ ನಿರ್ಧಾರದಿಂದಾಗಿ ಬ್ಯಾಂಕ್ ಗಳ ಕೃಷಿ ಸಾಲ ವಿತರಣೆ ಪ್ರಮಾಣ ಶೇ.70ರವರೆಗೂ ಕುಂಠಿತಗೊಂಡಿದೆ. ಈ ಬೆಳವಣಿಗೆಯಿಂದ ಬ್ಯಾಂಕ್ ಗಳ ಠೇವಣಿಗಳ ಮೇಲೆ ದುಷ್ಪರಿಣಾಮವಾಗಿದ್ದು, 2017ರ ನಂತರ ಒಂದೇ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸುಸ್ತಿಸಾಲದ ಪ್ರಮಾಣ ಶೇ.6ರಷ್ಟು ಹೆಚ್ಚಾಗಿದೆ. 2016–17ರಲ್ಲಿ ಬ್ಯಾಂಕ್‌ಗಳ ಕೃಷಿ ಸಾಲ ನೀಡಿಕೆ ಪ್ರಮಾಣ ಶೇ 12.4ರಷ್ಟು ಪ್ರಗತಿ ಸಾಧಿಸಿತ್ತು. 2017–18ರಲ್ಲಿ ಸಾಮರ್ಥ್ಯ ಶೇ 3.8ಕ್ಕೆ ಕುಸಿದಿದೆ ಎಂದು ಆರ್‌ಬಿಐ ವರದಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಫೆಬ್ರುವರಿಯಲ್ಲಿ ಉತ್ತರ ಪ್ರದೇಶ ರೈತರ ಸಾಲಮನ್ನಾ ಘೋಷಿಸಿದ್ದರು. ಅದಾದ ನಂತರ ಕನಿಷ್ಠ ಎಂಟು ರಾಜ್ಯಗಳು ಅಂದಾಜು ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತದ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿವೆ.

ಪ್ರಮುಖವಾಗಿ ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್‌, ಮಹಾರಾಷ್ಟ್ರ, ಛತ್ತೀಸ್ ಗಡ, ಮಧ್ಯಪ್ರದೇಶ ಸರ್ಕಾರಗಳು ಕೃಷಿ ಸಾಲಮನ್ನಾ ಮಾಡುವುದಾಗಿ ಹೇಳಿವೆ. ಕರ್ನಾಟಕದ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರೂ.46,756.61 ಕೋಟಿ ಕೃಷಿ ಸಾಲಮನ್ನಾ ಮಾಡಿದೆ. ಸಾಲಮನ್ನಾ ಘೋಷಣೆ ಮಾಡಿದ ಎಲ್ಲ ರಾಜ್ಯಗಳ ಪೈಕಿ ಇದು ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದು ತಿಳಿದುಬಂದಿದೆ.

Comments are closed.