
ಭೋಪಾಲ್: ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಮಧ್ಯ ಪ್ರದೇಶ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಇಂದು ಮಧ್ಯಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಕಮಲನಾಥ್ ಅವರು ಕೈಗೊಂಡ ಮೊದಲ ನಿರ್ಧಾರಗಳಲ್ಲಿ ಸಾಲ ಮನ್ನಾ ಕೂಡ ಒಂದು. ರೈತರ 2 ಲಕ್ಷ ರೂವರೆಗಿನ ಸಾಲಗಳೆಲ್ಲವನ್ನೂ ಅವರು ಮನ್ನಾ ಮಾಡಿದ್ದಾರೆ.
“ಕೃಷಿ ಆಧಾರಿತ ಆರ್ಥಿಕತೆ ಇರುವ ಮಧ್ಯ ಪ್ರದೇಶದಲ್ಲಿ ಕೃಷಿ ವಲಯವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಮಧ್ಯಪ್ರದೇಶದ ನೂತನ ಸಿಎಂ ಆಗಿರುವ ಕಮಲ್ ನಾಥ್ ಹೇಳಿದ್ದಾರೆ. ಮಂದಸೌರ್ನಲ್ಲಿ ಜೂನ್ನಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲೂ ಸಾಲ ಮನ್ನಾ ಮಾಡುವ ಆಶ್ವಾಸನೆ ಕೊಡಲಾಗಿತ್ತು.
ಕಾಂಗ್ರೆಸ್ನಿಂದ ಸಾಲ ಮನ್ನಾ ಭರವಸೆ ಬಂದ ನಂತರ ಮಧ್ಯ ಪ್ರದೇಶದ ರೈತರು ಸಾಲ ಮರುಪಾವತಿ ಮಾಡುವುದನ್ನೇ ನಿಲ್ಲಿಸಿದ್ದರೆಂಬ ವರದಿಗಳು ಬಂದಿವೆ. ಜೂನ್ 6ರಿಂದೀಚೆ ರೈತರ ಸಾಲ ಮರುಪಾವತಿಯ ಪ್ರಮಾಣವು ಶೇ. 10ರಷ್ಟು ಇಳಿಮುಖವಾಗಿರುವ ಅಂಕಿ ಅಂಶವನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ತೋರಿಸಿತ್ತು.
ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಜನಪ್ರಿಯ ಚುನಾವಣಾ ಭರವಸೆಗಳಲ್ಲಿ ರೈತರ ಸಾಲ ಮನ್ನಾ ಪ್ರಮುಖವಾದುದು. ಆದರೆ, ಸಾಲ ಮನ್ನಾದಿಂದ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಇತ್ತೀಚೆಗಷ್ಟೇ ಎಚ್ಚರಿಸಿದ್ದರು. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ರೈತರ ಸಾಲ ಮನ್ನಾ ಭರವಸೆ ಇರದಂತೆ ನಿರ್ಬಂಧ ಹೇರಬೇಕು ಎಂದು ರಘುರಾಮ್ ರಾಜನ್ ಸೇರಿದಂತೆ 13 ಸ್ವತಂತ್ರ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲ ಮನ್ನಾ ಭರವಸೆಗೆ ಬ್ರೇಕ್ ಹಾಕಿಸುವಂತೆ ಕೋರಿ ರಘುರಾಮ್ ರಾಜನ್ ಅವರು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಕೂಡ ಮಾಡಿಕೊಂಡಿರುವುದಾಗಿ ತಿಳಿಸಿದ್ದರು.
Comments are closed.