ರಾಷ್ಟ್ರೀಯ

ಬ್ಯಾಂಕ್​ಗಳ ಸಾಲ ತೀರಿಸಲು ಸಿದ್ಧನಿದ್ದು, ಪ್ಲೀಸ್​ ತೆಗೆದುಕೊಳ್ಳಿ !; ಟ್ವಿಟ್ಟರ್​ ಮೂಲಕ ಮನವಿ ಮಾಡಿದ ವಿಜಯ್​ ಮಲ್ಯ

Pinterest LinkedIn Tumblr

ನವದೆಹಲಿ: ತಲೆ ಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬ್ಯಾಂಕ್​ಗಳಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧನಿದ್ದು, ಬ್ಯಾಂಕುಗಳು ಅದನ್ನು ದಯವಿಟ್ಟು ಸ್ವೀಕರಿಸಬೇಕು ಎಂದು ಟ್ವಿಟ್ಟರ್​ ಮೂಲಕ ವಿಜಯ್​ ಮಲ್ಯ ಇಂದು ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳು ತನ್ನನ್ನು ಮೋಸಗಾರ, ದೇಶಬಿಟ್ಟು ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ ಎಂದೆಲ್ಲ ತಪ್ಪಾಗಿ ಬಿಂಬಿಸುತ್ತಿವೆ. ನಾನು ಸಾಲ ಮಾಡಿದ ಹಣವನ್ನು ವಾಪಾಸ್​ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಾನು ಕೊಟ್ಟ ಆಫರ್​ ಅನ್ನು ಬ್ಯಾಂಕ್​ಗಳು ಒಪ್ಪಿಕೊಂಡರೆ ಅದರಿಂದ ಖಂಡಿತ ನಷ್ಟವಾಗುವುದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಮಲ್ಯಗೆ ಬಂಧನದ ಭಯ ಕಾಡುತ್ತಿದೆಯಾ?
ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಹಗರಣದ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್​ ಮೈಕೆಲ್ ಅವರನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ಮಾಡುವಂತೆ ನಿನ್ನೆ ರಾತ್ರಿ ಆದೇಶ ನೀಡಲಾಗಿತ್ತು. ಈ ವೇಳೆ ನ್ಯೂಸ್​18 ಜೊತೆ ಮಾತನಾಡಿದ್ದ ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ, ಕ್ರಿಶ್ಚಿಯನ್​ ಮೈಕೆಲ್ ರೀತಿಯಲ್ಲೇ ನಮ್ಮ ದೇಶದಿಂದ ತಲೆಮರೆಸಿಕೊಂಡಿರುವ ವಿಜಯ್​ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನೂ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ವಿಜಯ್​ ಮಲ್ಯ ಸರಣಿ ಟ್ವೀಟ್​ಗಳನ್ನು ಮಾಡಿದ್ದು, ತನ್ನ ಆಫರ್​ ಒಪ್ಪಿಕೊಂಡು ಎಲ್ಲ ಆರೋಪಗಳಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಟ್ವೀಟ್​​ನಲ್ಲಿ ಏನಿದೆ?
ರಾಜಕಾರಣಿಗಳು ಮತ್ತು ಮಾಧ್ಯಮಗಳು ನಾನು ತಲೆಮರೆಸಿಕೊಂಡಿದ್ದೇನೆ ಎಂಬುದನ್ನೇ ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದಾರೆ. ನಾನು ಸಾರ್ವಜನಿಕ ವಲಯದ ಹಣವನ್ನು ಲೂಟಿ ಮಾಡಿ ಬೇರೆ ದೇಶಕ್ಕೆ ಓಡಿಹೋಗಿದ್ದೇನೆ ಎಂದು ತನಗೆ ಬೇಕಾದಂತೆ ವಿಷಯವನ್ನು ತಿರುಚುತ್ತಿದ್ದಾರೆ. ಆದರೆ, ಅದೆಲ್ಲ ಸುಳ್ಳು. ನಾನು ಬ್ಯಾಂಕ್​ಗಳಿಗೆ ಸೆಟಲ್​ಮೆಂಟ್​ ಮಾಡುತ್ತೇನೆ ಎಂದು ಭರವಸೆ ನೀಡಿರುವ ಬಗ್ಗೆ ಯಾಕೆ ಯಾರೂ ಇಷ್ಟು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ? ನನ್ನನ್ನು ಉತ್ತಮ ರೀತಿಯಲ್ಲಿ ಯಾಕೆ ಯಾರೂ ನಡೆಸಿಕೊಳ್ಳುತ್ತಿಲ್ಲ? ಎಂದು ಟ್ವೀಟ್​ ಮೂಲಕ ಮಲ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ವಿಮಾನದ ಇಂಧನದ ಬೆಲೆ ಹೆಚ್ಚಳವಾಗಿದ್ದು ಕೂಡ ಕಿಂಗ್​ಫಿಷರ್​ ಏರ್​ಲೈನ್ಸ್​ಗೆ ನಷ್ಟವಾಗಲು ಒಂದು ಕಾರಣವಾಗಿತ್ತು. ಆದರೆ, 3 ದಶಕಗಳ ಕಾಲ ಭಾರತದ ಅತಿದೊಡ್ಡ ಮದ್ಯದ ಕಂಪನಿಯನ್ನು ನಡೆಸಿದ್ದ ಕಿಂಗ್​ಫಿಷರ್​ ಗ್ರೂಪ್​ನಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಲಾಭವಾಗಿತ್ತು. ಹಾಗೇ, ಕಿಂಗ್​ಫಿಷರ್ ಏರ್​ಲೈನ್ಸ್​ನಿಂದಲೂ ರಾಜ್ಯ ಸರ್ಕಾರಕ್ಕೆ ಉತ್ತಮ ಆದಾಯ ಬಂದಿತ್ತು. ಆದರೆ, ದುರಾದೃಷ್ಟವೆಂಬಂತೆ ಆ ಕಂಪನಿ ನಷ್ಟ ಅನುಭವಿಸುವಂತಾಯಿತು. ಅದನ್ನೆಲ್ಲ ಮರೆತು ಈಗ ನನ್ನನ್ನು ಕಳ್ಳ ಎಂಬಂತೆ ಕಾಣಲಾಗುತ್ತಿದೆ ಎಂದು ವಿಜಯ್ ಮಲ್ಯ ಟ್ವೀಟ್​ ಮಾಡಿದ್ದಾರೆ.

ನನ್ನನ್ನು ಕೂಡ ಗಡಿಪಾರು ಮಾಡಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಆ ಬಗ್ಗೆ ಈಗ ನಾನೇನೂ ಹೇಳುವುದಿಲ್ಲ. ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದೆಲ್ಲ ಸುಳ್ಳು. ನಾನು ಪಡೆದ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಲು ನಾನು ಸಿದ್ಧನಿದ್ದೇನೆ. ಸರ್ಕಾರ ಮತ್ತು ಬ್ಯಾಂಕ್​ಗಳು ಆ ಹಣವನ್ನು ಸ್ವೀಕರಿಸಬೇಕು. ನಾನು ಹಣವನ್ನು ಹಿಂತಿರುಗಿಸುತ್ತೇನೆ ಎಂದರೂ ಬೇಡ ಎನ್ನುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

Comments are closed.